ಬೆಂಗಳೂರು: 2026ನೇ ಸಾಲಿನ ಸಿಇಟಿ ಅರ್ಜಿಯಲ್ಲಿ ಕ್ರೀಡೆ, ರಕ್ಷಣೆ, ಎನ್ ಸಿಸಿ ಇತ್ಯಾದಿ ವಿಶೇಷ ವರ್ಗಗಳನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ಮೇ 5ರಿಂದ 15ರವರೆಗೆ ತಮ್ಮ ಮೂಲ ದಾಖಲೆಗಳನ್ನು ವೇಳಾಪಟ್ಟಿ ಪ್ರಕಾರ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಸೂಚಿಸಿದ್ದಾರೆ.
ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿನ ಕೆಇಎ ಕಚೇರಿಗೆ ಬಂದು ಮೂಲ ದಾಖಲೆ ಹಾಗೂ ಎರಡು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೇ 5ರಿಂದ 7ರವರೆಗೆ ಕ್ರೀಡಾ ಕೋಟಾದ ಅಭ್ಯರ್ಥಿಗಳು ದಾಖಲೆ ಸಲ್ಲಿಸಬೇಕು. ಸಿಎಪಿಎಫ್, ಸಿಆರ್ ಪಿಎಫ್, ಸಿಐಎಸ್ಎಫ್, ಬಿಎಸ್ಎಫ್, ಐಟಿಬಿಪಿ ಕ್ಲೇಮ್ ಮಾಡಿರುವವರು ಮೇ 8 ರಂದು ಬರಬೇಕು. ಮಾಜಿ ಸೈನಿಕ/ಮಾಜಿ ಸಿಎಪಿಎಫ್ ಕ್ಲೇಮ್ ಮಾಡಿರುವವರು ಮೇ 9 ಮತ್ತು 10ರಂದು ಹಾಗೂ ಡಿಫೆನ್ಸ್ ಕೋಟಾ ಕ್ಲೇಮ್ ಮಾಡಿರುವವರು ಮೇ 11 ಮತ್ತು 12ರಂದು ದಾಖಲೆ ಸಲ್ಲಿಸಬೇಕು. ಮೇ 13ರಂದು ಸ್ಕೌಟ್ಸ್ ಆ್ಯಂಡ್ ಗೈಡ್ಸ್/ ಆಂಗ್ಲೊ-ಇಂಡಿಯನ್ ಹಾಗೂ ಮೇ 14 ಮತ್ತು 15ರಂದು ಎನ್ ಸಿಸಿ ಕ್ಲೇಮ್ ಮಾಡಿರುವರು ದಾಖಲೆ ಸಲ್ಲಿಸಬೇಕು ಎಂದು ಅವರು ವಿವರಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ ಸೈಟ್ ಗೆ ಭೇಟಿ ನೀಡಲು ಅವರು ಕೋರಿದ್ದಾರೆ.








