ನವದೆಹಲಿ: ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ದೊಡ್ಡ ಹಿನ್ನಡೆಯಾಗಿರುವ ಮಹತ್ವದ ತೀರ್ಪೊಂದರಲ್ಲಿ, ಆನ್‌ಲೈನ್ ಗೇಮ್‌ಗಳಲ್ಲಿ ಹಣವನ್ನು ಪಣಕ್ಕೊಡ್ಡುವ ಯಾವುದೇ ಚಟುವಟಿಕೆಗೆ ಶೇ. 28ರಷ್ಟು ಸರಕು ಮತ್ತು ಸೇವಾ ತೆರಿಗೆ (GST) ವಿಧಿಸುವುದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಗೇಮ್‌ಗಳು ಕೌಶಲ ಆಧಾರಿತವೇ (Skill-based) ಅಥವಾ ಅದೃಷ್ಟ ಆಧಾರಿತವೇ (Chance-based) ಎಂಬುದು ಇಲ್ಲಿ ಮುಖ್ಯವಲ್ಲ. ಹಣವನ್ನು ಪಣಕ್ಕೊಡ್ಡುವ ಪ್ರತಿಯೊಂದು ಆನ್‌ಲೈನ್ ಗೇಮಿಂಗ್ ಚಟುವಟಿಕೆಯು ತೆರಿಗೆ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ.
ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಕೇವಲ ಕಂಪನಿಯ ಲಾಭದ (Platform Fee) ಮೇಲೆ ಮಾತ್ರವಲ್ಲದೆ, ಆಟಗಾರರು ಪಣಕ್ಕೊಡ್ಡುವ ಒಟ್ಟು ಮೊತ್ತದ ಮೇಲೆ ಶೇ. 28ರಷ್ಟು ಜಿಎಸ್‌ಟಿ ಪಾವತಿಸಬೇಕು.
ಈ ತೆರಿಗೆ ನಿಯಮವನ್ನು ಹಿಂದಿನ ದಿನಾಂಕದಿಂದಲೇ ಜಾರಿಗೆ ತರುವ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಅಂದರೆ, ಕಂಪನಿಗಳು ಹಿಂದಿನ ಬಾಕಿ ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ.
ಆನ್‌ಲೈನ್ ಗೇಮಿಂಗ್‌ಗಳಲ್ಲಿ ಕೌಶಲದ ಪಾತ್ರವಿದೆ ಎಂಬ ಕಂಪನಿಗಳ ವಾದವನ್ನು ನ್ಯಾಯಾಲಯ ಪರಿಗಣಿಸಿಲ್ಲ. “ಹಣವನ್ನು ಪಣಕ್ಕಿಟ್ಟಾಗ ಅದು ಜೂಜಾಟದ ಸ್ವರೂಪ ಪಡೆಯುತ್ತದೆ ಮತ್ತು ಅಂತಹ ಸೇವೆಗಳಿಗೆ ತೆರಿಗೆ ವಿಧಿಸುವುದು ಸರ್ಕಾರದ ಹಕ್ಕು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.








