ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3 ರಿಂದ 4ರಷ್ಟು ಏರಿಕೆಯಾಗಲಿದೆ. ಜನವರಿ 1, 2024 ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಶೇಕಡಾ 50 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಡಿಸೆಂಬರ್ AICPI ಸೂಚ್ಯಂಕದ ಆಧಾರದ ಮೇರೆಗೆ ಇದನ್ನು ಜನವರಿ 30 ರೊಳಗೆ ಬಿಡುಗಡೆ ಮಾಡಲಾಗುತ್ತದೆ.
ಪ್ರಸ್ತುತ ಕೇಂದ್ರ ನೌಕರರು 46% ಡಿಎ ಪ್ರಯೋಜನವನ್ನು ಪಡೆಯುತ್ತಿದ್ದು, ಇದೀಗ 4% ಹೆಚ್ಚಳವಾದರೆ ತುಟ್ಟಿಭತ್ಯೆ 50% ಕ್ಕೆ ಹೆಚ್ಚಳವಾಗಲಿದೆ. ಮುಂದಿನ ಡಿಎ ಜನವರಿ 2024 ರಿಂದ ಏರಿಕೆ ಮಾಡಲಾಗುತ್ತದೆ. ಇದು ಮುಂದಿನ ಜೂನ್ ವರೆಗೆ ಅನ್ವಯವಾಗುತ್ತದೆ. ಇದನ್ನು ಆದಷ್ಟು ಶೀಘ್ರವಾಗಿ ಏರಿಕೆ ಮಾಡಲಾಗುತ್ತದೆ. ಲೋಕಸಭಾ ಚುನಾವಣೆ ಹಿನ್ನೆಲೆ ಹೋಳಿ ಹಬ್ಬದ ಮೊದಲೇ ಇಲ್ಲವೇ ಚುನಾವಣಾ ನೀತಿ ಸಂಹಿತೆ ಜಾರಿ ಮೊದಲು ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮನೆ ಬಾಡಿಗೆ ಭತ್ಯೆಯನ್ನೂ ಶೇ.3 ರಷ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಎಚ್.ಆರ್.ಎ ಶೇ.27 ರಿಂದ 30ಕ್ಕೆ ಹೆಚ್ಚಳವಾಗಲಿದೆ. ಇದರೊಂದಿಗೆ ಗ್ರೇಡ್ ಗೆ ಅನುಸಾರವಾಗಿ ಪ್ರಯಾಣ ಭತ್ಯೆಯಲ್ಲಿ ಕೂಡ ಏರಿಕೆಯಾಗಲಿದೆ ಎಂದು ಮಾಹಿತಿ ದೊರಕಿದೆ.