ಮೈಸೂರು: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ನಲ್ಲಿ ಆಗಲಿ ಅಥವಾ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಆಗಿಲ್ಲ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಇಂದಿಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು; ಕೇಂದ್ರ ಬಜೆಟ್‌ನಲ್ಲಿ ಎಲ್ಲ ರಾಜ್ಯಗಳಿಗೂ ಆದ್ಯತೆ ನೀಡಲಾಗಿದೆ. ಕೆಲವೊಂದು ರಾಜ್ಯದ ಹೆಸರುಗಳನ್ನು ಕಾಗ್ರೆಸ್ಸಿನವರು ಹೇಳುತ್ತಿದ್ದಾರೆ. ಆಂಧ್ರ ಪ್ರದೇಶ ಮತ್ತು ಬಿಹಾರದ ಹೆಸರು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದನ್ನೇ ನೆಪ ಮಾಡಿಕೊಂಡು ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳು ತಾರತಮ್ಯದ ಬಜೆಟ್ ಎಂದು ಆರೋಪ ಮಾಡಿದ್ದಾರೆ. ವಾಸ್ತವಕ್ಕೆ ಈ ಆರೋಪ ಸತ್ಯವಲ್ಲ ಎಂದು ಕೇಂದ್ರ ಸಚಿವರು ಹೇಳಿದರು.
ಮಂಡ್ಯ ಬಜೆಟ್ ಎಂದು ಮೂದಲಿಸಿದ್ದರು
2018ರಲ್ಲಿ ನಾನು ಸಿಎಂ ಆಗಿದ್ದಾಗ ಬಜೆಟ್ ಮಂಡಿಸಿದ್ದೆ. ಅದನ್ನು ಕಾಂಗ್ರೆಸ್ ನಾಯಕರು ಮಂಡ್ಯ ಬಜೆಟ್ ಎಂದು ಮೂದಲಿಸಿದ್ದರು. ಈಗ ಕೇಂದ್ರ ಬಜೆಟ್‌ನಲ್ಲಿ ಆಂಧ್ರಕ್ಕೆ ಪೂಲವರಮ್ ಅಣೆಕಟ್ಟು ಯೋಜನೆ ಘೋಷಿಸಿದೆ. ಅದು ಚಂದ್ರಬಾಬು ನಾಯ್ಡು ಅವರು ಸಿಎಂ ಆಗಿದ್ದಾಗ ರೂಪುಗೊಂಡು ಯೋಜನೆ. ನೇಪಾಳದಲ್ಲಿ ಮಳೆಯಾದಾಗ ಬಿಹಾರದಲ್ಲಿ ಪ್ರವಾಹ ಬರುತ್ತದೆ. ಹೀಗಾಗಿ ಎರಡು ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಇದರಲ್ಲಿ ರಾಜಕೀಯ ಹುಡುಕುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
48 ಲಕ್ಷ ಕೋಟಿ ರೂ.ಗಳ ಬಜೆಟ್ ನಲ್ಲಿ ಎಲ್ಲಾ ರಾಜ್ಯಗಳಿಗೂ ಅನುಕೂಲ ಆಗಿದೆ. ನೀಡಿರುವ ಅನುದಾನದಲ್ಲಿ ಕ್ಯಾಪಿಟಲ್ ಎಕ್ಸ್‌ಪೆಂಡೀಚರ್‌ಗೆ 11 ಲಕ್ಷ ಕೋಟಿ ರೂ. ನಿಗದಿಯಾಗಿದೆ. ನಾನು ಈ ಹಿಂದೆ ಸಿಎಂ ಆಗಿ, ಇದೀಗ ಕೇಂದ್ರ ಸಚಿವನಾಗಿ ಸ್ವಲ್ಪ ಅನುಭವ ಪಡೆದಿದ್ದೇನೆ. ನಾನು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಭೀಕರ ಪ್ರವಾಹ ಬಂತು. ಆ ಸಂದರ್ಭದಲ್ಲಿ ಕೇಂದ್ರ ಸರಕಾರ ಸಕಾರಾತ್ಮಕವಾಗಿ ನನಗೆ ಸ್ಪಂದಿಸಿತು. ಸ್ವತಃ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರೇ ಕರೆ ಮಾಡಿ ಮಾಹಿತಿ ಪಡೆದುಕೊಂಡು, ಎಲ್ಲಾ ರೀತಿಯ ನೆರವು ನೀಡುವ ಭರವಸೆ ನೀಡಿದರು. ಅಂತಹ ವಾತಾವರಣವನ್ನು ಕಾಂಗ್ರೆಸ್ ಸರಕಾರ ಯಾಕೆ ಸೃಷ್ಟಿಸಿಕೊಂಡಿಲ್ಲ? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.
ಎಲ್ಲದಕ್ಕೂ ಕೇಂದ್ರ ಸರಕಾರನ್ನು ಏಕೆ ದೂರುತ್ತೀರಿ? ಇಂತಹ ಸಂಘರ್ಷ ಸರಿಯಲ್ಲ. ರಾಜ್ಯದ ಸಂಸದರ ಮೇಲೆ ಏಕೆ ಆರೋಪಗಳನ್ನು ಮಾಡುತ್ತೀರಿ? ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರನ್ನು ಯಾಕೆ ಲಘುವಾಗಿ ನಡೆಸಿಕೊಳ್ಳುತ್ತೀರಿ? ಇಂತಹ ವರ್ತನೆಯಿಂದ ರಾಜ್ಯಕ್ಕೇ ಆಗುವ ಲಾಭವಾದರೂ ಏನು? ಸಂಘರ್ಷದಿಂದಲೇ ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರಕಾರ ವಾಸ್ತವ ಪರಿಸ್ಥಿತಿಯನ್ನು ಕೇಂದ್ರದ ಮುಂದೆ ಸಮರ್ಥವಾಗಿ ಇಡಬೇಕು. ಅದು ಬಿಟ್ಟು ಎಲ್ಲದಕ್ಕೂ ಕೇಂದ್ರದ ವಿರುದ್ಧ ಆರೋಪ ಮಾಡೋದು ಸರಿಯಲ್ಲ ಎಂದು ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ಚಾಟಿ ಬಿಸಿದರು ಕುಮಾರಸ್ವಾಮಿಯವರು.
ರಾಜ್ಯ ಸರಕಾರದ ಜಗಳಗಂಟ ವರ್ತನೆ
ವಿನಾಕಾರಣ ಜಗಳಗಂಟ ವರ್ತನೆಯಿಂದ ಕೇಂದ್ರದಿಂದ ಅನ್ಯಾಯ ಆಗುತ್ತಿದೆ ಎಂದು ಕಾಂಗ್ರೆಸ್ ಸರಕಾರ ತಪ್ಪು ಪ್ರಚಾರ ಮಾಡುತ್ತಿದೆ. ವಾಸ್ತವದಲ್ಲಿ ರಾಜ್ಯ ಸರಕಾರದಿಂದಲೇ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ತನ್ನ ರಾಜಕೀಯ ಪ್ರತಿಷ್ಠೆ ಹಾಗೂ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸರಕಾರ ರಾಜಕೀಯ ಹಿತಾಸಕ್ತಿಯ ಜತೆ ಚೆಲ್ಲಾಟ ಆಡುತ್ತಿದ್ದರು.
ಈಗಾಗಲೇ ರಾಜ್ಯದ ಅನೇಕ ಯೋಜನೆಗಳಿಗೆ ಕೇಂದ್ರವು ಅನುದಾನ ನೀಡಿದೆ. ಕೆಲ ಯೋಜನೆಗಳ ದುಡ್ಡಿನಲ್ಲಿ ನಯಾಪೈಸೆಯನ್ನು ರಾಜ್ಯ ಬಳಕೆ ಮಾಡಿಕೊಂಡಿಲ್ಲ. ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣವನ್ನೂ ಮೀಸಲಿಡಬೇಕು. ಆಗ ಮಾತ್ರ ಕೇಂದ್ರವು ತನ್ನ ಪಾಲಿನ ಹಣ ಬಿಡುಗಡೆ ಮಾಡುತ್ತದೆ. ಆದರೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣ ಮಿಸಲಿಡದೇ ಕೇಂದ್ರದ ವಿರುದ್ಧ ವಿನಾಕಾರಣ ಆರೋಪಿಸುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಒಂದು ಕಡೆ ಕೇಂದ್ರ ಸರಕಾರ ಸಹಕಾರ ಕೊಡಬೇಕು ಎನ್ನುತ್ತಾರೆ. ಇನ್ನೊಂದೆಡೆ ಕೇಂದ್ರ ಸಚಿವರನ್ನು ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಾರೆ. ನಾನು ಕೇಂದ್ರ ಸಚಿವನಾಗಿ ಎಲ್ಲಿಗಾದರೂ ಭೇಟಿ ನೀಡಿದರೆ, ಸಭೆ ಮಾಡಿದರೆ ಅಧಿಕಾರಿಗಳನ್ನು ನನ್ನ ಸಭೆಗೆ ಹೋಗಬೇಡಿ ಎಂದು ಸುತ್ತೋಲೆ ಹೊರಡಿಸುತ್ತಾರೆ. ಇದು ಸಹಕಾರ ಕೇಳುವ ರೀತಿಯೇ? ಎಂದು ಕೇಂದ್ರ ಸಚಿವರು ಕಿಡಿಕಾರಿದರು.
ಕಾಂಗ್ರೆಸ್ ನಾಯಕರಿಂದ ರಾಜ್ಯದ ಅಭಿವೃದ್ಧಿ ಆಗುತ್ತಾ?
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕೇಂದ್ರ ಸರಕಾರದತ್ತ ಬೊಟ್ಟು ಮಾಡುತ್ತಾರೆ ಕಾಂಗ್ರೆಸ್ ನಾಯಕರು. ಕರ್ನಾಟಕಕ್ಕೇ ನನ್ನನ್ನು ಬರಬೇಡಿ ಎನ್ನುತ್ತಾರೆ. ಮಂಡ್ಯಕ್ಕೆ ಬರಲೇಬೇಡಿ ಎನ್ನುತ್ತಾರೆ. ಇಂತಹವರಿಂದ ರಾಜ್ಯದ ಅಭಿವೃದ್ಧಿ ಆಗುತ್ತಾ? ಕೇವಲ ಕಾಟಾಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದರೆ ಉಪಯೋಗವೇನು? ರಾಜ್ಯಕ್ಕೆ ಒಳ್ಳೆಯದು ಆಗಬೇಕಾದರೆ ಪ್ರಧಾನಿಗಳಿಗೆ ಪ್ರಾಮಾಣಿಕವಾಗಿ ಮನವರಿಕೆ ಮಾಡಬೇಕು. ಕೇಂದ್ರದ ಜತೆ ಸೌಹಾರ್ದ ಸಂಬಂಧ ಹೊಂದಿರಬೇಕು ಎಂದು ಸಚಿವರು ಒತ್ತಿ ಹೇಳಿದರು.
ರಾಜ್ಯಕ್ಕೆ ಆಗಬೇಕಿರುವ ಅಭಿವೃದ್ಧಿಗಳ ಬಗ್ಗೆ ಪಟ್ಟಿ ಮಾಡಿ ಕೊಡಬೇಕು. ರಾಜ್ಯದ ಅಭಿವೃದ್ಧಿ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ನಾನು ಕೇಂದ್ರಕ್ಕೆ ಹೋದ ಮೇಲೆ ರಾಜ್ಯದ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಾಳಜಿ ಇಟ್ಟಿದ್ದೇನೆ. ಎಲ್ಲಾ ಕೇಂದ್ರ ಸಚಿವರು ರಾಜ್ಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಸಚಿವನಾಗಿ ಕೇವಲ ಒಂದು ತಿಂಗಳಾಗಿದೆ. ಕಾವೇರಿ ಸಮಸ್ಯೆ ಒಂದು ತಿಂಗಳಿಗೆ ಬಗೆಹರಿಸಿ ಎನ್ನುತ್ತಾರೆ. ಇವರಿಂದ ಕಾವೇರಿ ವಿವಾದಕ್ಕೆ ಎಷ್ಟು ಪರಿಹಾರ ಸಿಕ್ಕಿದೆ ಎಂದು ಕುಮಾರಸ್ವಾಮಿ ಅವರು ಚಾಟಿ ಬೀಸಿದರು.
ಮೇಕೆದಾಟು ಯೋಜನೆ ಬಗ್ಗೆ ನಾನು ಮತ್ತು ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. ಸೋಮವಾರ ಮೇಕೆದಾಟು ಯೋಜನೆ ಬಗ್ಗೆ ಸಂಸತ್ ಅಧಿವೇಶನದಲ್ಲಿ ಕೂಡ ಮಾತನಾಡಲಿದ್ದಾರೆ ದೇವೇಗೌಡರು. ಈ ವಯಸ್ಸಿನಲ್ಲೂ ದೇವೇಗೌಡರು ಕಾವೇರಿ ಹೋರಾಟದ ಬಗ್ಗೆ ಧ್ವನಿ ಎತ್ತಿದ್ದಾರೆ.. ಆದ್ರೆ ಇಂಡಿಯಾ ಮೈತ್ರಿಕೂಟ ಯಾವೊಬ್ಬ ನಾಯಕರು ಕೂಡ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನಸಭೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕ ಜಿ.ಡಿ ಹರೀಶ್ ಗೌಡ, ಎಂ ಎಲ್ಸಿ ಗಳಾದ ಸಿ ಎನ್ ಮಂಜೇಗೌಡ, ವಿವೇಕಾನಂದ, ಮಾಜಿ ಶಾಸಕರಾದ ಕೆ.ಮಹದೇವ್, ಅಶ್ವಿನ್ ಕುಮಾರ್ ಸೇರಿ ಜಿಲ್ಲೆಯ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
‘ಪ್ಯಾರೀಸ್ ಒಲಂಪಿಕ್ಸ್’ನಲ್ಲಿ ಕಂಚಿನ ಪದಕ ಗೆದ್ದ ‘ಮನು ಭಾಕರ್’ಗೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಅಭಿನಂದನೆ