ಭಾರತದ 150 ವರ್ಷಗಳ ಜನಗಣತಿ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಬಹುನಿರೀಕ್ಷಿತ ‘ಜನಗಣತಿ 2027’ (Census 2027) ಪ್ರಕ್ರಿಯೆಯು ನಾಳೆಯಿಂದ (ಏಪ್ರಿಲ್ 1) ಅಧಿಕೃತವಾಗಿ ಚಾಲನೆ ಪಡೆಯಲಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆಯಲಿದೆ.
ಈ ಬಾರಿ ಗಣತಿದಾರರು ಕಾಗದದ ಫಾರ್ಮ್ಗಳ ಬದಲಿಗೆ ತಮ್ಮ ಮೊಬೈಲ್ ಅಥವಾ ಟ್ಯಾಬ್ಲೆಟ್ಗಳಲ್ಲಿನ ವಿಶೇಷ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲಿದ್ದಾರೆ. ಇದರಿಂದ ದತ್ತಾಂಶ ಸಂಗ್ರಹಣೆ ವೇಗವಾಗಿ ಮತ್ತು ನಿಖರವಾಗಿ ನಡೆಯಲಿದೆ.
ಸಾರ್ವಜನಿಕರು ತಾವೇ ಸ್ವತಃ ಜನಗಣತಿ ಪೋರ್ಟಲ್ಗೆ ಲಾಗಿನ್ ಆಗಿ ತಮ್ಮ ಕುಟುಂಬದ ವಿವರಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಹೀಗೆ ಮಾಡಿದವರಿಗೆ ಒಂದು ರೆಫರೆನ್ಸ್ ನಂಬರ್ ಸಿಗಲಿದ್ದು, ಗಣತಿದಾರರು ಮನೆಗೆ ಬಂದಾಗ ಅದನ್ನು ತೋರಿಸಿದರೆ ಸಾಕು.
ಏಪ್ರಿಲ್ 1 ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿರುವ ಮೊದಲ ಹಂತದಲ್ಲಿ ‘ಮನೆಗಳ ಪಟ್ಟಿ’ (Houselisting) ಮತ್ತು ‘ವಸತಿ ಗಣತಿ’ ಮಾಡಲಾಗುತ್ತದೆ. ಇದರಲ್ಲಿ ಮನೆಗಳ ಸ್ಥಿತಿಗತಿ, ಲಭ್ಯವಿರುವ ಸೌಲಭ್ಯಗಳ ಬಗ್ಗೆ 31ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗುತ್ತದೆ.ಡಿಜಿಟಲ್ ಪೋರ್ಟಲ್ ಕನ್ನಡ ಸೇರಿದಂತೆ ದೇಶದ 16 ಪ್ರಮುಖ ಭಾಷೆಗಳಲ್ಲಿ ಲಭ್ಯವಿದ್ದು, ಜನರು ತಮ್ಮ ಮಾತೃಭಾಷೆಯಲ್ಲೇ ಮಾಹಿತಿ ನೀಡಬಹುದಾಗಿದೆ.ಸಂಗ್ರಹಿಸಿದ ಮಾಹಿತಿಯು ಅತ್ಯಂತ ಸುರಕ್ಷಿತವಾಗಿದ್ದು, ಇದನ್ನು ಯಾವುದೇ ವೈಯಕ್ತಿಕ ಗುರುತಿನ ಉದ್ದೇಶಕ್ಕೆ ಬಳಸದೆ, ಕೇವಲ ದೇಶದ ಯೋಜನೆಗಳ ರೂಪಿಸುವಿಕೆ ಮತ್ತು ಅಂಕಿ-ಅಂಶಗಳಿಗಾಗಿ ಬಳಸಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.








