ನವದೆಹಲಿ: ದೇಶದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸುವ ಕಾರ್ಯದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ (ಏಪ್ರಿಲ್ 7, 2026) ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯದ ಕಠಿಣ ನಿಲುವಿನ ಬೆನ್ನಲ್ಲೇ, “ಮುಂದಿನ ಎರಡು ವಾರಗಳಲ್ಲಿ ಎಲ್ಲಾ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು” ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಕೋರ್ಟ್ಗೆ ಭರವಸೆ ನೀಡಿದ್ದಾರೆ.
ಉನ್ನತ ಮಟ್ಟದ ಸಭೆಗಳಿಗೆ ಕೇವಲ ‘ಅಂಡರ್ ಸೆಕ್ರೆಟರಿ’ ಮಟ್ಟದ ಅಧಿಕಾರಿಗಳನ್ನು ಕಳುಹಿಸುತ್ತಿದ್ದ ಕೇಂದ್ರ ಸರ್ಕಾರದ ನಡೆಯನ್ನು ನ್ಯಾಯಾಲಯ ಪ್ರಶ್ನಿಸಿದೆ. “ಇದು ನ್ಯಾಯಾಲಯಕ್ಕೆ ನೀಡುತ್ತಿರುವ ಗೌರವವೇ?” ಎಂದು ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ. ಸಂದೀಪ್ ಮೆಹ್ತಾ ಅವರ ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
ಕೋರ್ಟ್ ಆದೇಶದಂತೆ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಖುದ್ದಾಗಿ ಹಾಜರಾಗಿ ವಿವರಣೆ ನೀಡಿದರು. ಸಿಸಿಟಿವಿ ಅಳವಡಿಕೆಯ ಮೇಲ್ವಿಚಾರಣೆಗಾಗಿ ರಾಷ್ಟ್ರಮಟ್ಟದ ಸಮಿತಿಯೊಂದಿಗೆ ಸಮನ್ವಯ ಸಾಧಿಸುವುದಾಗಿ ಅವರು ತಿಳಿಸಿದ್ದಾರೆ. ಕೇರಳ ರಾಜ್ಯವು ಈಗಾಗಲೇ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಅತ್ಯಾಧುನಿಕ ಸಿಸಿಟಿವಿ ಸಾಫ್ಟ್ವೇರ್ ಮತ್ತು ಡ್ಯಾಶ್ಬೋರ್ಡ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದೇ ಮಾದರಿಯನ್ನು ಇಡೀ ದೇಶಕ್ಕೆ ಅನ್ವಯಿಸಲು ಏಕೆ ಸಾಧ್ಯವಿಲ್ಲ ಎಂದು ಕೋರ್ಟ್ ಪ್ರಶ್ನಿಸಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶ ಕೂಡ ಈ ನಿಟ್ಟಿನಲ್ಲಿ ಉತ್ತಮ ಪ್ರಗತಿ ಸಾಧಿಸಿವೆ ಎಂದು ತಿಳಿದುಬಂದಿದೆ.







