ಬೆಂಗಳೂರು : ಉತ್ತರ ಪ್ರದೇಶ ಮಹಾರಾಷ್ಟ್ರ ಹಾಗೂ ಕರ್ನಾಟಕದ ರೌಡಿಗಳಿಗೆ ಅಕ್ರಮವಾಗಿ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರದ ಇಬ್ಬರು ಆರೋಪಿಗಳನ್ನು ಇದೀಗ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಸಾಂಗ್ಲಿಯ ವಸಂತ್ ಹೌಸಿಂಗ್ ಸೊಸೈಟಿ ನಿವಾಸಿ ರಾಹುಲ್ ಸತೀಶ್ ಮಾನೆ ಹಾಗೂ ಮಲ್ಲಿಕ್ ಸಲೀಂ ಶೇಖ ಬಂಧಿತ ಆರೋಪಿಗಳು.ಮಧ್ಯಪ್ರದೇಶದ ಚೌಟು ಎಂಬಾತ ತಲೆಮರೆಸಿಕೊಂಡಿದ್ದು ಆತನಿಗೆ ಶೋಧ ಮುಂದುವರಿಸಲಾಗಿದೆ.
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳದ ಬಳಿ ಆರೋಪಿಗಳನ್ನು ಬಂಧಿಸಿ, ಎರಡು ಕಂಟ್ರಿಮೇಡ್ ಪಿಸ್ತೂಲ್, 9 ಜೀವಂತ ಗುಂಡು, ಒಂದು ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಉಲ್ಲಾಳದ ಬಳಿ ರೌಡಿಗಳಿಗೆ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಆರೋಪಿಗಳು ಪ್ರಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಮಹಾರಾಷ್ಟ್ರದ ಮೀರಜ್ ಮಹಾತ್ಮ ಗಾಂಧಿ ಪೊಲೀಸ್ ಠಾಣೆಯಲ್ಲಿ 2, ಮೀರಜ್ ಟೌನ್ ಠಾಣೆಯಲ್ಲಿ 1, ಸಾಂಗ್ಲಿ ವೆಲ್ವಾಡಿ ಠಾಣೆಯಲ್ಲಿ 1, ಮೀರಜ್ ಎಂಐಡಿಸಿ ಠಾಣೆಯಲ್ಲಿ 1, ಬೆಂಗಳೂರು ನಗರದ ಬ್ಯಾಟರಾಯನಪುರ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿತ್ತು ಎಂದು ಮೂಲಗಳು ಹೇಳಿವೆ.
ರಾಹುಲ್ ಸತೀಶ್ ಮಾನೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಸೇರಿದ್ದ. ಕಾರಾಗೃಹದಲ್ಲಿ ಒಂದು ವರ್ಷ ಶಿಕ್ಷೆ ಅನುಭವಿಸುತ್ತಿದ್ದ ವೇಳೆ ರೌಡಿಗಳ ಪರಿಚಯವಾಗಿತ್ತು. ಜೈಲಿನಿಂದ ಬಿಡುಗಡೆಯಾದ ಮೇಲೆ ಹಳೆಯ ಸಂಪರ್ಕ ಬಳಸಿ ನಗರದ ಬೇರೆ ಬೇರೆ ಠಾಣಾ ವ್ಯಾಪ್ತಿಯ ರೌಡಿಗಳಿಗೆ ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಸುತ್ತಿದ್ದಎಂದು ಪೊಲೀಸರು ಹೇಳಿದರು.