ನವದೆಹಲಿ: ಸಿಬಿಎಸ್ಇ ಈ ವರ್ಷ 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕಾಗಿ ಜಾರಿಗೆ ತಂದಿರುವ ಹೊಸ ‘ಆನ್-ಸ್ಕ್ರೀನ್ ಮಾರ್ಕಿಂಗ್’ (OSM) ಪದ್ಧತಿಯು ತಾಂತ್ರಿಕ ದೋಷಗಳು ಮತ್ತು ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಿಬಿಎಸ್ಇಯ ಆಡಳಿತ ಮಂಡಳಿಯ ಸದಸ್ಯರು, ಈ ಹೊಸ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿಗೆ ತರುವ ಮುನ್ನ ವಿವಿಧ ಪ್ರಾದೇಶಿಕ ಕಚೇರಿಗಳಲ್ಲಿ ‘ಪ್ರಾಯೋಗಿಕ ಪರೀಕ್ಷೆ’ (Pilot Projects) ನಡೆಸಬೇಕು ಎಂದು ಜೂನ್ 2025ರ ಸಭೆಯಲ್ಲೇ ಸಲಹೆ ನೀಡಿದ್ದರು. ಆದರೆ, ಮಂಡಳಿಯು ಈ ಸಲಹೆಯನ್ನು ನಿರ್ಲಕ್ಷಿಸಿ ನೇರವಾಗಿ ಜಾರಿಗೆ ತಂದಿತು.
ಮಂಡಳಿಯು ದೆಹಲಿಯ ಐದು ಶಾಲೆಗಳಲ್ಲಿ ಕೇವಲ 100 ಶಿಕ್ಷಕರನ್ನು ಬಳಸಿಕೊಂಡು ಎರಡು ದಿನಗಳ ಅಲ್ಪಾವಧಿಯ ವ್ಯಾಯಾಮವನ್ನಷ್ಟೇ ನಡೆಸಿತು. ತರಬೇತಿ ಮತ್ತು ಸಮರ್ಪಕ ಸಿದ್ಧತೆ ಇಲ್ಲದೆ ಈ ವ್ಯವಸ್ಥೆಯನ್ನು ಜಾರಿಗೆ ತರಬೇಡಿ ಎಂದು ಶಿಕ್ಷಕರು ಎಚ್ಚರಿಸಿದ್ದರೂ ಮಂಡಳಿ ಕ್ಯಾರೆ ಎನ್ನಲಿಲ್ಲ.
ಈ ಪದ್ಧತಿಯಿಂದಾಗಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳು ಅಸ್ಪಷ್ಟವಾಗಿರುವುದು, ಪುಟಗಳು ಅದಲುಬದಲಾಗಿರುವುದು ಮತ್ತು ಅಂಕಗಳನ್ನು ತಪ್ಪಾಗಿ ನಮೂದಿಸಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಈ ವರ್ಷದ 12ನೇ ತರಗತಿಯ ಉತ್ತೀರ್ಣ ಪ್ರಮಾಣವು ಶೇ. 85.20ಕ್ಕೆ ಕುಸಿದಿದೆ (2019ರ ನಂತರದ ಕನಿಷ್ಠ ಮಟ್ಟ).
ಸಂಸದೀಯ ಸಮಿತಿಯ ಸಭೆ: ಉದ್ಭವಿಸಿರುವ ಸಮಸ್ಯೆಗಳು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳನ್ನು ಪರಿಶೀಲಿಸಲು, ಜೂನ್ 2ರಂದು ಸಂಸದೀಯ ಸ್ಥಾಯಿ ಸಮಿತಿಯು ಸಿಬಿಎಸ್ಇ ಅಧ್ಯಕ್ಷರು ಮತ್ತು ಶಿಕ್ಷಣ ಸಚಿವಾಲಯದ ಅಧಿಕಾರಿಗಳನ್ನು ಸಭೆಗೆ ಕರೆಸಿದೆ.








