ಪುಣೆ: ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿಯ ನೀಟ್-ಯುಜಿ (NEET-UG) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಬಿಐ (CBI), ಭೌತಶಾಸ್ತ್ರ (Physics) ಪ್ರಶ್ನೆಗಳನ್ನು ಸೋರಿಕೆ ಮಾಡಿದ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಬಂಧಿತಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೇಮಿಸಿದ್ದ ವಿಷಯ ತಜ್ಞೆ (Expert) ಮನೀಷಾ ಸಂಜಯ್ ಹವಾಲ್ದಾರ್ ಎಂದು ಗುರುತಿಸಲಾಗಿದ್ದು, ಈ ಹಗರಣದಲ್ಲಿ ಸಿಬಿಐ ನಡೆಸಿದ 11ನೇ ಬಂಧನ ಇದಾಗಿದೆ.
ಮಹಾರಾಷ್ಟ್ರದ ಪುಣೆಯ ಶೇಠ್ ಹೀರಾಲಾಲ್ ಸರಾಫ್ ಪ್ರಶಾಲಾದಲ್ಲಿ ಉದ್ಯೋಗಿಯಾಗಿರುವ ಮನೀಷಾ, ನೀಟ್ ಪರೀಕ್ಷಾ ಪ್ರಕ್ರಿಯೆಯಲ್ಲಿ ಎನ್ಟಿಎ ಪರವಾಗಿ ತಜ್ಞೆಯಾಗಿ ಕೆಲಸ ಮಾಡುತ್ತಿದ್ದರು.
ಸಿಬಿಐ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಎನ್ಟಿಎ ಮನೀಷಾ ಅವರನ್ನು ವಿಷಯ ತಜ್ಞೆಯಾಗಿ ನೇಮಿಸಿದ್ದರಿಂದ ಅವರಿಗೆ ಭೌತಶಾಸ್ತ್ರದ ಅಂತಿಮ ಪ್ರಶ್ನೆ ಪತ್ರಿಕೆಗಳನ್ನು ನೋಡುವ ಸಂಪೂರ್ಣ ಅವಕಾಶವಿತ್ತು. ಈ ರಹಸ್ಯ ಪ್ರವೇಶವನ್ನು ದುರುಪಯೋಗಪಡಿಸಿಕೊಂಡ ಆರೋಪಿ, ಪರೀಕ್ಷೆಗೆ ಮುಂಚಿತವಾಗಿಯೇ ಭೌತಶಾಸ್ತ್ರ ವಿಭಾಗದ ಪ್ರಶ್ನೆಗಳನ್ನು ಹೊರಗೆ ಸೋರಿಕೆ ಮಾಡಿದ್ದರು.
ಈ ಹಗರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಕೆಮಿಸ್ಟ್ರಿ ಮತ್ತು ಬಯಾಲಜಿ ವಿಷಯಗಳ ಇತರ ಎನ್ಟಿಎ ತಜ್ಞರಂತೆ, ಈಕೆಯೂ ಸಹ ಮಧ್ಯವರ್ತಿಗಳ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದರು. ಪರೀಕ್ಷೆಗೂ ಮುನ್ನವೇ ಪುಣೆಯ ನಿವಾಸದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ಕ್ಲಾಸ್ ನಡೆಸಿ, ಈ ಪ್ರಶ್ನೆಗಳನ್ನು ಮತ್ತು ಅದಕ್ಕೆ ಸರಿಯಾದ ಉತ್ತರಗಳನ್ನು ಬರೆಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಲಾಗಿತ್ತು.
ಈ ಬಾರಿಯ ನೀಟ್ ಪರೀಕ್ಷಾ ಅಕ್ರಮದಲ್ಲಿ ಎನ್ಟಿಎ ಆಂತರಿಕ ವ್ಯವಸ್ಥೆಯೇ ಸಂಪೂರ್ಣವಾಗಿ ಹದಗೆಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಪೇಪರ್ ಸೆಟ್ ಮಾಡುವ ಮತ್ತು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸುವ ಸಮಿತಿಯಲ್ಲಿದ್ದ ತಜ್ಞರೇ ಭ್ರಷ್ಟರಾಗಿರುವುದು ಬೆಳಕಿಗೆ ಬಂದಿದೆ. ಸಿಬಿಐ ಈಗಾಗಲೇ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಪೇಪರ್ ಸೋರಿಕೆಯಲ್ಲಿ ಭಾಗಿಯಾಗಿರುವ ಎನ್ಟಿಎಯ ಇತರ ಉನ್ನತ ಅಧಿಕಾರಿಗಳನ್ನು ಗುರುತಿಸಲು ತನಿಖೆ ಮುಂದುವರಿದಿದೆ ಎಂದು ತಿಳಿಸಿದೆ.








