ಬೆಂಗಳೂರು : ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಸಂಚಲನ ಮೂಡಿಸಿರುವ ಸಾಮಾಜಿಕ, ಶೈಕ್ಷಣಿ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನ ಈ ತಿಂಗಳ ಅಂತ್ಯದೊಳಗೆ ಸರ್ಕಾರಕ್ಕೆ ಸಲ್ಲಿಸುವುದಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಜ.31ಕ್ಕೆ ತಮ್ಮ ಅಧ್ಯಕ್ಷೀಯ ಅವಧಿ ಮುಗಿ ಯುವ ಹಿನ್ನೆಲೆಯಲ್ಲಿ ಅಷ್ಟರೊಳಗೆ ಪೂರ್ಣ ವರದಿ ಸಲ್ಲಿಸಲಾಗುವುದು. ಮಧ್ಯಂತರ ವರದಿ ಎಂಬ ಗೊಂದಲಕ್ಕೆ ಅವಕಾಶ ಇಲ್ಲ. ವರದಿಯ ಪುಸ್ತಕ ಮುದ್ರಣವಾಗುತ್ತಿದ್ದು, ವರದಿ ಸಲ್ಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಯ ಕೇಳಲಾಗುವುದು. ಅವರು ಸಮಯ ನೀಡಿದರೆ ಜ.30ರೊಳಗೆ ವರದಿ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ವರದಿಯನ್ನು ಜಾತಿ ಜನಗಣತಿ ವರದಿ ಎಂದಾಗಲಿ, ಕಾಂತರಾಜು ಅಥವಾ ಜಯಪ್ರಕಾಶ್ ಹೆಗ್ಡೆ ವರದಿ ಎಂದಾಗಲಿ ಭಾವಿಸದೇ, ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯಾಗಿರಲಿದೆ. ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ಬಳಿಕ ಅದನ್ನು ಸಂಪುಟದಲ್ಲಿ ಚರ್ಚಿಸಿ, ನಂತರ ವಿಧಾನ ಮಂಡಲ ಅಧಿವೇಶದಲ್ಲಿ ಮಂಡಿಸಬೇಕಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಸಮೀಕ್ಷೆ ವರದಿ ಆಗಿರುತ್ತದೆ. ಕಾಂತರಾಜು ವರದಿಯೂ ಅಲ್ಲ, ಹೆಗ್ಡೆ ವರದಿಯೂ ಅಲ್ಲ. ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ, ದತ್ತಾಂಶಗಳ ವರದಿ ಇದು. ಹಿಂದುಳಿದ ವರ್ಗಗಳ ವರದಿ. ವರದಿ ಕೊಡುವುದು ಮಾತ್ರ ನಮ್ಮ ಕೆಲಸ. ಸಮುದಾಯಗಳ ಬೇಡಿಕೆ ಈಡೇರಿಸುವುದು ಸರ್ಕಾರದ ಕೆಲಸ, ನಮ್ಮದಲ್ಲ. ಸಿಎಂ ಬಳಿ ಸಮಯ ಕೇಳಿದ್ದೇವೆ. ಬಜೆಟ್ ಸಿದ್ಧತೆಯಲ್ಲಿ ಅವರು ಬ್ಯುಸಿ ಇದ್ದಾರೆ ಎಂದರು.