ಬೆಳ್ತಂಗಡಿ: ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ತೆರಳಿದ್ದ 17 ವರ್ಷದ ಅಲ್ಪಸಂಖ್ಯಾತ ಬಾಲಕನನ್ನು ಅಪಹರಿಸಿ, ಮನುಷ್ಯತ್ವ ಮರೆತು ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಈ ಘಟನೆ ಸಂಬಂಧ ಭಜರಂಗದಳದ ಮೂವರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಬಾಲಕ, ಮಾರ್ಚ್ 11 ರಂದು ತನ್ನ ಸ್ನೇಹಿತರೊಂದಿಗೆ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಜಾತ್ರೆಗೆ ತೆರಳಿದ್ದನು. ರಾತ್ರಿ 8:30 ರ ಸುಮಾರಿಗೆ ಆತನ ಸ್ನೇಹಿತರು ಜಾಯೆಂಟ್ ವೀಲ್ ಹತ್ತಿದ್ದಾಗ, ಬಾಲಕ ಅವರ ಮೊಬೈಲ್‌ಗಳನ್ನು ಹಿಡಿದುಕೊಂಡು ಕೆಳಗೆ ನಿಂತಿದ್ದನು.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಭಜರಂಗದಳದ ಕಾರ್ಯಕರ್ತರು ಎನ್ನಲಾದ ಗೌರವ್ ಶೆಟ್ಟಿ, ರಮೇಶ್ ಮತ್ತು ಇತರರು ಬಾಲಕನ ಹೆಸರು ಮತ್ತು ಧರ್ಮವನ್ನು ಕೇಳಿದ್ದಾರೆ. ಬಾಲಕ ತಾನು ಮುಸ್ಲಿಂ ಎಂದು ಹೇಳುತ್ತಿದ್ದಂತೆಯೇ, ಗುಂಪು ಆತನ ಮೇಲೆ ಹಲ್ಲೆ ನಡೆಸಲು ಆರಂಭಿಸಿದೆ. ಬಾಲಕನ ಸ್ನೇಹಿತರು ಬಿಡಿಸಲು ಬಂದಾಗ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಅಪಹರಣ ಮತ್ತು ಹಲ್ಲೆ: ಜಾತ್ರೆಯ ಜನಸಂದಣಿಯ ನಡುವೆಯೇ ಬಾಲಕನನ್ನು ಬೈಕ್‌ನಲ್ಲಿ ಅಪಹರಿಸಿದ ತಂಡ, ಸುಮಾರು 5 ಕಿಲೋಮೀಟರ್ ದೂರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದೆ. ಅಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಸೇರಿ ಬಾಲಕನಿಗೆ ಮೃಗೀಯವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ದೂರು ದಾಖಲು: ಈ ಘಟನೆಯಿಂದಾಗಿ ಬಾಲಕ ತೀವ್ರವಾಗಿ ಮಾನಸಿಕವಾಗಿ ಜರ್ಜರಿತನಾಗಿದ್ದು, ಆತ್ಮಹತ್ಯೆಯಂತಹ ಆಲೋಚನೆಗಳನ್ನು ಮಾಡುತ್ತಿದ್ದಾನೆ ಎಂದು ಬಾಲಕನ ತಂದೆ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ. ಘಟನೆ ನಡೆದು ಒಂದು ವಾರದ ನಂತರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗೌರವ್ ಶೆಟ್ಟಿ, ರಮೇಶ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪ್ರಸ್ತುತ ಪೊಲೀಸರು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಒಂದೇ ದಿನದಲ್ಲಿ ಹೂಡಿಕೆದಾರರ 7.6 ಲಕ್ಷ ಕೋಟಿ ಸಂಪತ್ತು ಭಸ್ಮ! | Stock market
ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ, ಬೆಂಗಳೂರು ಹೋಟೆಲ್ ಅಸೋಸಿಯೇಷನ್








