ಬೆಂಗಳೂರು : ಬೆಂಗಳೂರಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರ ಮಧ್ಯ ಬಿಬಿಎಂಪಿ ಅವುಗಳಿಗೆ ಚಿಕನ್ ಬಿರಿಯಾನಿ ನೀಡಲು ಮುಂದಾಗಿದೆ. ಇದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಕಿದ್ದಾರೆ. ನಿನ್ನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 28 ರಂದು ಬೀದಿ ನಾಯಿಗಳು ಕಚ್ಚಿ ವೃದ್ಧ ಸೀತಪ್ಪ ಎಂಬುವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಬೀದಿ ನಾಯಿ ದಾಳಿ ದುರ್ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಎಸ್ಪಿ ವಂಶಿಕೃಷ್ಣ ಕೋನಾ ನೇತೃತ್ವದ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖಾ ವರದಿಯನ್ನ ನಾಲ್ಕು ದಿನದೊಳಗೆ ನೀಡುವಂತೆ ಲೋಕಾಯುಕ್ತರು ನಿರ್ದೇಶಿಸಿದ್ದಾರೆ.
ದುರ್ಘಟನೆ ಸಂಬಂಧ ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ, ಪಶುಸಂಗೋಪನೆ ವಿಭಾಗದ ಜಂಟಿ ನಿರ್ದೇಶಕರು ಹಾಗೂ ಆರೋಗ್ಯಾಧಿಕಾರಿ ಒಳಗೊಂಡಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಲೋಕಾಯುಕ್ತರು ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು. ಇದರಂತೆ ಎಲ್ಲಾ ಅಧಿಕಾರಿಗಳು ಬುಧವಾರ ವಿಚಾರಣೆ ಹಾಜರಾಗಿ ಘಟನೆ ಬಗ್ಗೆ ಹಾಗೂ ಕೈಗೊಂಡ ಕ್ರಮಗಳ ಕುರಿತು ಹೇಳಿಕೆ ನೀಡಿದರು.
ಜುಲೈ 28ರಂದು ಬೆಳಗಿನ ಜಾವ 3.30ಕ್ಕೆ ಬೀದಿ ನಾಯಿಗಳು ಕಚ್ಚಿದ್ದರಿಂದ ಸೀತಪ್ಪ ಅವರು ಸಾವನ್ನಪ್ಪಿದ್ದಾರೆ. ಈಗಾಗಲೇ 33 ಬೀದಿ ನಾಯಿಗಳನ್ನ ಹಿಡಿದು ನಿಗಾ ಘಟಕದಲ್ಲಿ ಇರಿಸಲಾಗಿದೆ. ಯಾವ ಬೀದಿ ನಾಯಿಗಳು ಕಚ್ಚಿವೆ ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ. ಆದರೂ ಎಲ್ಲಾ ನಾಯಿಗಳಿಗೂ ಸೂಕ್ತ ಚಿಕಿತ್ಸೆ ನೀಡುವುದಾಗಿ ಲೋಕಾಯುಕ್ತರ ಮುಂದೆ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.