ಬೆಂಗಳೂರು : ಕಾರ್ಯಕ್ರಮ ಒಂದರಲ್ಲಿ ಕನ್ನಡ ಹಾಡು ಹಾಡಿ ಎಂದಿದ್ದಕ್ಕೆ ಖ್ಯಾತ ಗಾಯಕ ಸೋನು ನಿಗಮ್ ಅವರು ಪಹಲ್ಗಾಮ್ ದಾಳಿಗೆ ಕನ್ನಡಿಗರನ್ನು ಹೋಲಿಕೆ ಮಾಡಿ, ಅವಹೇಳನಕಾರಿ ಹೇಳಿಕೆ ನೀಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಸೋನು ನಿಗಮ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಸೋನು ನಿಗಮ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿದೆ.
ತನ್ನ ವಿರುದ್ಧದ FIR ರದ್ದು ಕೋರಿ ಗಾಯಕ ಸೋನು ನಿಗಮ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ತನಿಖೆಗೆ ಹಾಜರಾಗಿಲ್ಲ ಎಂದು ಸರ್ಕಾರದ SPP ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತನಿಖೆಗೆ ಸಹಕರಿಸಿದರೆ ಬಲವಂತದ ಕ್ರಮ ಕೈಗೊಳ್ಳುವುದಿಲ್ಲವೆಂದು ಹೇಳಿಕೆ ನೀಡಿದ್ದು, ಈ ವೇಳೆ ಬೆಂಗಳೂರಿಗೆ ಸೋನು ನಿಗಮ್ ಹಾಜರಾದರೆ ಸಮಸ್ಯೆ ಆಗಬಹುದು. ಹಾಗಾಗಿ ವಿಚಾರಣೆಗೆ ಕುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಸೋನು ನಿಗಮ್ ಪರ ವಕೀಲರು ಮನವಿ ಮಾಡಿದ್ದಾರೆ.
ಈ ವೇಳೆ ಹೈಕೋರ್ಟ್ ನ್ಯಾಯಾಧೀಶರು ಸೋನು ನಿಗಮ್ ವೆಚ್ಚದಲ್ಲಿ ಅವರಿದ್ದ ಸ್ಥಳದಲ್ಲಿ ತನಿಖೆ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ತನಿಖೆ ನಡೆಸಲು ಸೂಚನೆ ನೀಡಿದರು. ಹೈಕೋರ್ಟ್ ಅನುಮತಿ ಪಡೆಯದೆ ದೋಷಾರೋಪ ಪಟ್ಟಿ ಸಲ್ಲಿಸಬಾರದು. ಸೋನು ನಿಗಮ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ ಹೊರಡಿಸಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಶಂಕರ್ ಅಮರಣ್ಣವರ್ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ.