ಬೆಂಗಳೂರು : ವಿಧಾನಸಭೆಯ ಚುನಾವಣೆಯ ವೇಳೆ ಬಿಜೆಪಿ ವಿರುದ್ಧ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್ ರದ್ದು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರ್ಜಿ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಪರವಾಗಿ ಇಂದು ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ಸರ್ಕಾರವನ್ನು ಟೀಕಿಸಿದರೆ ಬಿಜೆಪಿಯನ್ನು ಟೀಕೆಸಿದಂತಲ್ಲ. ದೂರುದಾರರ ವಿರುದ್ಧ ರಾಹುಲ್ ಗಾಂಧಿ ಟ್ವೀಟ್ ಮಾಡಿಲ್ಲ. ಪತ್ರಿಕೆಗಳಲ್ಲಿ ರಾಹುಲ್ ಗಾಂಧಿ ಜಾಹೀರಾತು ನೀಡಿಲ್ಲ. ರಾಹುಲ್ ಗಾಂಧಿ ಫೋಟೋ ಮಾತ್ರ ಜಾಹಿರಾತಿನಲ್ಲಿ ಬಳಸಿಕೊಳ್ಳಲಾಗಿದೆ. ಆಗ ರಾಹುಲ್ ಗಾಂಧಿ ಪಕ್ಷದ ಯಾವುದೇ ಹುದ್ದೆಯಲ್ಲಿ ಇರಲಿಲ್ಲ. ದೂರುದಾರರನ್ನು ಉಲ್ಲೇಖಿಸಿಲ್ಲವಾದ್ದರಿಂದ ಮಾನ ನಷ್ಟ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ವಾದಿಸಿದರು.
ರಾಹುಲ್ ಗಾಂಧಿ ಪರ ವಕೀಲರ ವಾದಕ್ಕೆ ಬಿಜೆಪಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿಯೇ ಅಧಿಕಾರದಲ್ಲಿ ಇದುದ್ದರಿಂದಲೇ ಈ ರೀತಿ ಜಾಹೀರಾತು ನೀಡಲಾಗಿದೆ. ಜಾಹಿರಾತು ನಿಂದಾಗಿ 500 ರಿಂದ 1000 ಮತಗಳ ಅಂತರದಲ್ಲಿ 40 ಸ್ಥಾನ ಕಳೆದುಕೊಂಡಿದೆ ಎಂದು ದೂರುದಾರ ಭಾರತೀಯ ಜನತಾ ಪಕ್ಷದ ಪರ ವಕೀಲ ವಿನೋದ್ ಕುಮಾರ್ ಅವರು ವಾದ ಮಂಡಿಸಿದರು. ಬಳಿಕ ಹೈಕೋರ್ಟ್ ಏಕ ಸದಸ್ಯ ಪೀಠ ವಾದ ಪ್ರತಿವಾದ ಆಲಿಸಿ ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ಮುಂದೂಡಿತು.








