ಹೊಸದಿಲ್ಲಿ: ಅಂತ್ಯೋದಯ ಯೋಜನೆ ಅಡಿಯಲ್ಲಿ ಬರುವ ಫಲಾನುಭವಿಗಳಿಗೆ ಕೇಂದ್ರ ಸಿಹಿಸುದ್ದಿಯನ್ನು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ ಬರುವ 1.89 ಕೋಟಿ ಕುಟುಂಬಗಳಿಗೆ ಪಡಿತರ ಅಂಗಡಿ ಮೂಲಕ ಪೂರೈಸುವ ಸಕ್ಕರೆಗೆ 2026ರ ಮಾರ್ಚ್ 31ರ ತನಕ ಸಬ್ಸಿಡಿ ವಿಸ್ತರಿಸುವ ಪ್ರಸ್ತಾವಕ್ಕೆ ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು. ಪಡಿತರ ವ್ಯವಸ್ಥೆ ಮೂಲಕ ಸಕ್ಕರೆ ವಿತರಿಸುವ ಎಲ್ಲ ರಾಜ್ಯಗಳಿಗೂ ಪ್ರತಿ ಕೆ.ಜಿ. ಸಕ್ಕರೆಗೆ 18.50 ರೂ ಸಬ್ಸಿಡಿ ಸಿಗಲಿದೆ. ಸಕ್ಕರೆಯನ್ನು ಸಂಗ್ರಹಿಸಿ ಅದನ್ನು ವಿತರಿಸುವ ಹೊಣೆ ರಾಜ್ಯಗಳ ಮೇಲಿದೆ. ಇದರಿಂದ ಬಡವರಿಗೆ ಅನುಕೂಲವಾಗುತ್ತದೆ.
ಈಗಾಗಲೇ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂ-ಜಿಕೆಎವೈ) ಅಡಿ ಯಲ್ಲಿಉಚಿತ ಪಡಿತರವನ್ನು ನೀಡುತ್ತಿದೆ. ಇದಲ್ಲದೆ ಸಬ್ಸಿಡಿ ದರದಲ್ಲಿ ಬೇಳೆ, ಗೋಧಿ ಹಿಟ್ಟು ಮತ್ತು ಸಕ್ಕರೆಯ ಲಭ್ಯತೆಯಿಂದ ‘ಎಲ್ಲರಿಗೂ ಆಹಾರ, ಎಲ್ಲರಿಗೂ ಪೌಷ್ಟಿ ಕತೆ’ ಎಂಬ ಮೋದಿ ಅವರ ಖಾತ್ರಿ ಹಂಬಲ ಸಾಕಾರಗೊಂಡಿದೆ.
ಯುಎಇ ಜತೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ: ಸಂಯುಕ್ತ ಅರಬ್ ಒಕ್ಕೂಟ (ಯುಎಇ) ಜತೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಉತ್ಪಾದನೆ, ವಿದೇಶಿ ನೇರ ಹೂಡಿಕೆ ಸೇರಿದಂತೆ ವಿವಿಧ ವಲಯಗಳಲ್ಲಿ ಎರಡೂ ರಾಷ್ಟ್ರಗಳ ಪಾಲುದಾರಿಕೆಯನ್ನು ವೃದ್ಧಿಸಲಿದೆ. ಪ್ರಧಾನಿ ಮೋದಿ ಅವರು ಈ ತಿಂಗಳು ಯುಎಇಗೆ ಭೇಟಿ ನೀಡುವ ನಿರೀಕ್ಷೆ ಹಿನ್ನೆಲೆಯಲ್ಲಿ ಈ ಒಪ್ಪಂದ ಮಹತ್ವದ್ದಾಗಿದೆ.
ಒಪ್ಪಂದವು ಮುಖ್ಯವಾಗಿ ಹೂಡಿಕೆದಾರರ ವಿಶ್ವಾಸವನ್ನು ವರ್ಧಿಸು ತ್ತದೆ. ಇದರಿಂದ ವಿದೇಶಿ ಹೂಡಿಕೆ ಹಾಗೂ ಸಾಗರೋತ್ತರ ನೇರ ಹೂಡಿಕೆ ಅವಕಾಶಗಳು ಹೆಚ್ಚುತ್ತವೆ. ಇದರಿಂದ ದೇಶೀಯ ಉತ್ಪಾದನೆಗೆ ಒತ್ತು ಸಿಗ ಲಿದ್ದು, ಆಮದು ಅವಲಂಬನೆ ಕಡಿಮೆ ಯಾಗಲಿದೆ. ಉದ್ಯೋಗ ಸೃಷ್ಟಿಯ ಮೇಲೂ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಸರಕಾರ ಹೇಳಿದೆ.