ಬೆಂಗಳೂರು : ‘ಕನ್ನಡ ನಮ್ಮ ಉಸಿರು, ನಮ್ಮ ಜೀವ’ ಕರ್ನಾಟಕದ ಜನತೆಯ ಅಭಿವೃದ್ದಿಯೇ ನಮ್ಮ ಮುಖ್ಯ ಗುರಿ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸರ್ವಜ್ಞನಗರ ವಿಧಾನ ಸಭಾ ಕ್ಷೇತ್ರದ ಮಾರುತಿ ಸೇವಾ ನಗರದ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಶುಕ್ರವಾರ ನೂತನ ಬಸ್ ತಂಗುದಾಣವನ್ನು ಉದ್ಘಾಟಿಸಿ ಸರ್ವಜ್ಞನಗರ ವಿಧಾನ ಸಭಾ ಕ್ಷೇತ್ರದ ಶಾಸಕರೂ ಆಗಿರುವ ಇಂಧನ ಸಚಿವ ಹಾಗೂ ಕೆ.ಜೆ.ಜಾರ್ಜ್ ಮಾತನಾಡಿದರು.
“ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಬಸ್ ತಂಗುದಾಣ ನಿರ್ಮಾಣವಾಗಿದೆ. ನಾನು ಡಾ.ರಾಜ್‌ಕುಮಾರ್ ಅಭಿಮಾನಿ, ಅವರ ಹೆಸರಿನ ಬಸ್‌ನಿಲ್ದಾಣವನ್ನು ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯ. ನಮ್ಮ ಕನ್ನಡದ ಧ್ವಜ ಜಾಗತಿಕ ಮಟ್ಟದಲ್ಲಿ ಹಾರಾತ್ತಿದೆ. ಕನ್ನಡವೇ ನನ್ನ ಉಸಿರು, ರಾಜ್ಯದ ಜನರ ಅಭಿವೃದ್ದಿಯೇ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಮುಖ್ಯ ಗುರಿ” ಎಂದರು.
“ಸಂಘದವರು ಪ್ರಯಾಣಿಕರಿಗೆ ನೆರಳು, ಮಳೆಯಿಂದ ರಕ್ಷಣೆ ಮತ್ತು ಕುಡಿಯುವ ನೀರಿನ ಸೌಕರ್ಯ ಒದಗಿಸಿಕೊಟ್ಟಿದ್ದಾರೆ. ಇದು ಎಲ್ಲರೂ ಹೆಮ್ಮೆ ಪಡುವ ಕಾರ್ಯಕ್ರಮವಾಗಿದೆ. ಜನ ನೆನಯುವುದು ಒಳ್ಳೆಯ ಕೆಲಸಗಳಿಂದ ಮಾತ್ರ. ಸರ್ವಜ್ಞ ನಗರದ ಪ್ರತಿನಿಧಿಯಾಗಿರುವುದು ನನ್ನ ಭಾಗ್ಯ. ನಮ್ಮ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ,” ಎಂದು ಕೆ.ಜೆ.ಜಾರ್ಜ್ ತಿಳಿಸಿದರು.
“ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಗರಿಕರಿಗೆ ಸೌಕರ್ಯ ಒದಗಿಸಲು ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನೊಂದು ವರ್ಷದಲ್ಲಿ ನಮ್ಮ ಕ್ಷೇತ್ರದಲ್ಲಿ ಎಲ್ಲರೂ ನೆನಪಿಟ್ಟುಕೊಳ್ಳುವಂಥ ಯೋಜನೆಗಳು ಅನುಷ್ಠಾನಗೊಳ್ಳಲಿದೆ. ಕಾಚರಕನಹಳ್ಳಿಯಲ್ಲಿ ಕೆರೆಯನ್ನು ಅಭಿವೃದ್ದಿಪಡಿಸುತ್ತಿದ್ದೇವೆ. ಕ್ರೀಡಾಂಗಣ, ಆಸ್ಪತ್ರೆ ಮಾಡುತ್ತಿದ್ದೇವೆ. ಜತೆಗೆ ಬೃಹತ್ ಸರ್ವಜ್ಞ ಪ್ರತಿಮೆಯನ್ನು ನಿರ್ಮಿಸಲಿದ್ದೇವೆ. ಅಭಿವೃದ್ದಿ ವಿಚಾರದಲ್ಲಿ ನಾವು ಎಂದಿಗೂ ರಾಜಕೀಯ ಮಾಡಿಲ್ಲ, ಅದು ಚುನಾವಣೆಗಷ್ಟೇ ಸೀಮಿತ,” ಎಂದರು.
ಸಾರಾ ಗೋವಿಂದ್ ನನ್ನ ಆತ್ಮೀಯರು
ನಾನು ಕೊಡಗಿನಲ್ಲಿ ಇದ್ದ ಸಮಯದಿಂದಲೂ ಸಾರಾ ಗೋವಿಂದು ಅವರ ಪರಿಚಯವಿದೆ. ನಟ ಅಂಬರೀಶ್ ಅವರನ್ನು ನನಗೆ ಪರಿಚಯಿಸಿಕೊಟ್ಟಿದ್ದರು. ನಾನು ರಾಜಕಾರಣಕ್ಕೆ ಬಂದ ಮೇಲೂ ಬಹಳ ಆತ್ಮೀಯವಾಗಿಯೇ ಇದ್ದಾರೆ. ಡಾ.ರಾಜ್ ಹಾಗೂ ಪುನೀತ್ ಅವರ ಅಭಿಮಾನಿಗಳ ಸಂಘವನ್ನು ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಜಾರ್ಜ್ .ಮೆಚ್ಚಿಗೆ ವ್ಯಕ್ತಪಡಿಸಿದರು.
ಡಾ.ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ಸಾರಾ ಗೋವಿಂದು ಮಾತನಾಡಿ, “ಸರ್ವಜ್ಞ ನಗರ ಕ್ಷೇತ್ರದಲ್ಲಿ ಕೆ.ಜೆ.ಜಾರ್ಜ್ ಅವರು ಸಾಕಷ್ಟು ಅಭಿವೃದ್ದಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಮಹನೀಯರ ನೆನಪನ್ನು ಶಾಶ್ವತಗೊಳಿಸುವ ಕೆಲಸವೂ ಅವರಿಂದ ನಡೆದಿದೆ,” ಎಂದು ಶ್ಲಾಘಿಸಿದರು.
ಅಭಿಮಾನಿ ಸಂಘದ ಡಿ.ಕೆ.ರಾಜು, ವೆಂಕಟೇಶ್, ಅಮರ್, ಮುರಳಿ ಹಾಗೂ ಕಾಂಗ್ರೆಸ್ ಮುಖಂಡರಾದ ರಘುದೇವರಾಜ್ ಉಪಸ್ಥಿತರಿದ್ದರು.








