ಬೆಂಗಳೂರು: ಶ್ವಾನ ಪ್ರೇಮಿ ಹಾಗೂ ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ಸತೀಶ್ ಕ್ಯಾಡಬಾಮ್ಸ್ (ಡಾಗ್ ಸತೀಶ್) ಅವರಿಗೆ ಹೊಸ ಕಾನೂನು ಸಂಕಷ್ಟ ಎದುರಾಗಿದೆ. ರೌಡಿಶೀಟರ್‌ಗಳೊಂದಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪದ ಮೇಲೆ ಸಿಸಿಬಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ: ಕಳೆದ ಮಾರ್ಚ್ 13ರಂದು ಆರ್.ಟಿ.ನಗರದ ಪಾರ್ಟಿ ಹಾಲ್‌ವೊಂದರಲ್ಲಿ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಪಿ. ಮೂರ್ತಿ ಎಂಬಾತನ ಜನ್ಮದಿನದ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸತೀಶ್ ಕ್ಯಾಡಬಾಮ್ಸ್, ರೌಡಿಶೀಟರ್‌ಗಳಾದ ಪಿ. ಮೂರ್ತಿ ಮತ್ತು ದಾಸ ಎಂಬವರೊಂದಿಗೆ ಮಾಸ್ ಹಾಡೊಂದಕ್ಕೆ ಹೆಜ್ಜೆ ಹಾಕಿ ರೀಲ್ಸ್ ಮಾಡಿದ್ದರು.
ಬಳಿಕ ಈ ವಿಡಿಯೋವನ್ನು “ಸತೀಶ್ ಬಾಸ್ ಸತೀಶ್ ಬಾಸ್” ಎಂಬ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ನೋಡನೋಡುತ್ತಿದ್ದಂತೆಯೇ ವಿಡಿಯೋ ವೈರಲ್ ಆಗಿತ್ತು.
ಸಿಸಿಬಿಯಿಂದ ಎನ್‌ಸಿಆರ್ ದಾಖಲು: ಸಾಮಾಜಿಕ ಜಾಲತಾಣಗಳಲ್ಲಿ ರೌಡಿಶೀಟರ್‌ಗಳ ಚಲನವಲನಗಳ ಮೇಲೆ ಸದಾ ನಿಗಾ ಇರಿಸುವ ಸಿಸಿಬಿ ಸಂಘಟಿತ ಅಪರಾಧ ನಿಯಂತ್ರಣ ದಳದ ಇನ್ಸ್‌ಪೆಕ್ಟರ್ ಮಹದೇವಯ್ಯ, ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೂಡಲೇ ಅವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದು, ಸದ್ಯ ಪ್ರಕರಣದ ಬಗ್ಗೆ ಎನ್‌ಸಿಆರ್ (NCR) ದಾಖಲಾಗಿದೆ.
ಶೀಘ್ರದಲ್ಲೇ ಸತೀಶ್ ಕ್ಯಾಡಬಾಮ್ಸ್ ಹಾಗೂ ರೌಡಿಶೀಟರ್ ಪಿ. ಮೂರ್ತಿಗೆ ನೋಟಿಸ್ ಜಾರಿ ಮಾಡಿ, ಅವರಿಂದ ವಿವರಣೆ ಪಡೆದುಕೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಬಿಗ್ ಬಾಸ್‌ನ ಮತ್ತೋರ್ವ ಸ್ಪರ್ಧಿ ರಜತ್ ಬುಜ್ಜಿ ವಿರುದ್ಧ, ಇದೇ ಸತೀಶ್ ಕ್ಯಾಡಬಾಮ್ಸ್ ಜೊತೆಗಿನ ಸ್ನೇಹ ಬಿಡುವಂತೆ ಬೆದರಿಕೆ ಹಾಕಿದ ಆರೋಪದಡಿ ಎಫ್‌ಐಆರ್ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಮನಸ್ಸಿನ ನೆಮ್ಮದಿಗೆ ಬೇಕು ಕೇವಲ 24 ನಿಮಿಷಗಳ ಸಂಗೀತ! ಆತಂಕ ದೂರ ಮಾಡಲು ಹೊಸ ‘ಮದ್ದು’ ಪತ್ತೆ ಹಚ್ಚಿದ ಸಂಶೋಧಕರು
ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ, ಬೆಂಗಳೂರು ಹೋಟೆಲ್ ಅಸೋಸಿಯೇಷನ್








