ಬೆಂಗಳೂರು : ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಬರುವ ವಿದ್ಯಾರ್ಥಿಗಳಿಗಾಗಿ ಧಾರವಾಡದಲ್ಲಿ ನಾಲ್ಕು ಮತ್ತು ಬೆಂಗಳೂರಿನಲ್ಲಿ ಎರಡು ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಡಿಜಿಟಲ್ ಯುಗದಲ್ಲಿ ಹೆಚ್ಚುತ್ತಿರುವ ಮೊಬೈಲ್ ವ್ಯಸನದಿಂದ ಮಕ್ಕಳ ಮೇಲೆ ಬೀರುತ್ತಿರುವ ಅಡ್ಡ ಪರಿಣಾಮವನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
2026-27ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ ಸಿದ್ದರಾಮಯ್ಯ , ಮಕ್ಕಳಲ್ಲಿನ ಒತ್ತಡ ನಿವಾರಿಸಿ, ಮಾನಸಿಕ ಆರೋಗ್ಯವನ್ನು ಸುಧಾರಿಸಲು 24 ಬಿಆರ್ಸಿ ಕೇಂದ್ರಗಳಲ್ಲಿ ಪ್ರತಿ ಕೇಂದ್ರಕ್ಕೆ ಒಬ್ಬ ಅರ್ಹ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಿಸಲಾಗುವುದು ಎಂದು ಘೋಷಿಸಿದರು.
ಶಾಲಾ – ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ, ಕಠಿಣ ನಿಯಮ ಮತ್ತು ಸಹಾಯ ಕೇಂದ್ರಗಳ ಮೂಲಕ ಮಾದಕ ವಸ್ತುಗಳ ಮೇಲೆ ಕಟ್ಟು ನಿಟ್ಟಿನ ನಿರ್ಬಂಧ ಹೇರಲಾಗುವುದು ಸಿಎಂ ತಿಳಿಸಿದ್ದಾರೆ.






