ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಬಜೆಟ್ ಅನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿದರು. ಇದು ಸಿಎಂ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ ಆಗಿದ್ದು, ಈ ಬಾರಿಯ ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂ. ಇದೆ.
ಬಜೆಟ್ ಮಂಡನೆಗೂ ಮುನ್ನ ಮಾತನಾಡಿದ ಮುಖ್ಯಮಂತ್ರಿಗಳು, “2026-27ನೇ ಸಾಲಿನ ಆಯವ್ಯಯ ಮಂಡಿಸಲು ನನಗೆ ಅತ್ಯಂತ ಖುಷಿಯಾಗುತ್ತಿದೆ. ನಮ್ಮ ಸರ್ಕಾರವು ಕೋಟ್ಯಂತರ ಕುಟುಂಬಗಳ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಮೂಲಕ ನಾವು ದೊಡ್ಡ ಸಾಧನೆ ಮಾಡಿದ್ದೇವೆ” ಎಂದು ಹರ್ಷ ವ್ಯಕ್ತಪಡಿಸಿದರು.
2026-27ನೇ ಸಾಲಿನ ಬಜೆಟ್ನ ಪ್ರಮುಖ ಹೈಲೈಟ್ಸ್:
ಬಜೆಟ್ ಗಾತ್ರ ಹಾಗೂ ಸಾಲ: ಈ ವರ್ಷದ ಒಟ್ಟು ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂ.ಗಳಾಗಿದ್ದು, ಪ್ರಸ್ತುತ ರಾಜ್ಯದ ಒಟ್ಟು ಸಾಲದ ಪ್ರಮಾಣ 8 ಲಕ್ಷ 24 ಸಾವಿರ 389 ಕೋಟಿ ರೂ.ಗಳಷ್ಟಿದೆ ಎಂದು ಸಿಎಂ ತಿಳಿಸಿದ್ದಾರೆ.
ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: ಉದ್ಯೋಗ ನೇಮಕಾತಿಯ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅಲ್ಲದೆ, 56 ಸರ್ಕಾರಿ ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ.
50 ಉತ್ಪನ್ನಗಳಿಗೆ GI ಟ್ಯಾಗ್: ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕರ್ನಾಟಕದ 50ಕ್ಕೂ ಹೆಚ್ಚು ವಿಶಿಷ್ಟ ಉತ್ಪನ್ನಗಳಿಗೆ ಭೌಗೋಳಿಕ ಸೂಚ್ಯಂಕ (GI) ಮಾನ್ಯತೆ ನೀಡಲು ನಿರ್ಧರಿಸಲಾಗಿದೆ.
ದಲಿತ ಕವಿ ಸಿದ್ದಲಿಂಗಯ್ಯ ಟ್ರಸ್ಟ್: ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ, ಖ್ಯಾತ ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ನೂತನ ಟ್ರಸ್ಟ್ ನಿರ್ಮಿಸುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.
ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ ಜಾರಿ ಮಾಡಲಾಗುವುದು. 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ. ಮಣ್ಣಿನ ಗುಣಮಟ್ಟ ಹೆಚ್ಚಿಸಲು ವಸುಧಾಮೃತ ಯೋಜನೆ ಜಾರಿ. ಮುಂದಿನ ಮೂರು ವರ್ಷದಲ್ಲಿ ಸಸ್ಯ ಸಂಜೀವಿ ಯೋಜನೆ ಜಾರಿಗೆ ತರಲಾಗುವುದು.
3 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣ ವಿತರಣೆ, 7 ಲಕ್ಷ ರೈತರಿಗೆ ಹನಿ ನೀರಾವರಿ ಸ್ಥಾಪನೆ ಮಾಡಲಾಗುವುದು. 363 ಕೋಟಿ ರೂ. ವೆಚ್ಚದಲ್ಲಿ ಕೃಷಿ ಹೊಂಡ ಸ್ಥಾಪಿಸಲಾಗುವುದು. ಎಂದು ಹೇಳಿದ್ದಾರೆ.
16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.




