ದಾವಣಗೆರೆ: ಲೋಕಸಭಾ ಚುನಾವಣೆ ಮಾತ್ರವಲ್ಲದೇ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮುಂದುವರಿಯಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.
ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲು ಪ್ರಯತ್ನ ಶುರುವಾಗಿದೆ. ನಾನು 23 ಕ್ಷೇತ್ರಗಳಲ್ಲೂ ಸುತ್ತಿದ್ದೇನೆ. ಉಳಿದ ಕ್ಷೇತ್ರಗಳಿಗೂ ಹೋಗುವೆ. ದೇವೇಗೌಡರು ಇಳಿವಯಸ್ಸಿನಲ್ಲೂ ಪ್ರಚಾರ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿರೋಧಿಯಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ. ಅಂಬೇಡ್ಕರ್ ನಿಧನರಾದಾಗ ಅವರ ಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಜವಾಹರಲಾಲ್ ನೆಹರೂ ಸಮಾಧಿಗೆ 52.6 ಎಕರೆ, ಇಂದಿರಾಗಾಂಧಿ ಸಮಾಧಿಗೆ 45 ಎಕರೆ, ರಾಜೀವ್ ಗಾಂಧಿ ಸಮಾಧಿಗೆ 15 ಎಕರೆ ಜಾಗ ನೀಡಲಾಗಿದೆ. ಆದರೆ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಎರಡು ಬಾರಿ ಚುನಾವಣೆಗೆ ನಿಂತಾಗ ಸೋಲಿಸಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ₹11,164 ಕೋಟಿ ಹಣವನ್ನು ಬೇರೆ ಯೋಜನೆಗಳಿಗೆ ವರ್ಗಾಹಿಸಿದ್ದು, ಅನ್ಯಾಯ ಮಾಡಿಕೊಂಡು ಬರಲಾಗಿದೆ’ ಎಂದು ಹೇಳಿದರು.