ಲಂಡನ್ : ಸೆ.8ರಂದು ನಿಧನರಾದ ಬ್ರಿಟನ್ ರಾಣಿ 2ನೇ ಎಲಿಜಬೆತ್ (96) ಅವರ ಅಂತಿಮ ಯಾತ್ರೆಯೂ ಲಂಡನ್ನ ವೆಸ್ಟ್ಮಿನ್ಸ್ಟರ್ ಅಬ್ಬೆಯಲ್ಲಿ ರಾಜಮನೆತನದ ಸದಸ್ಯರು ಮತ್ತು ವಿಶ್ವ ಹಲವು ನಾಯಕರ ಉಪಸ್ಥಿತಿಯೊಂದಿಗೆ ಆರಂಭವಾಗಿದೆ
#WATCH | The State funeral service for Queen Elizabeth II begins at Westminster Abbey in London with the Royal family members and world leaders in attendance
(Source: Reuters) pic.twitter.com/agsllmfdHa
— ANI (@ANI) September 19, 2022
ಭಾರತದ ರಾಷ್ಟ್ರಪತಿ (Indian President) ದ್ರೌಪದಿ ಮುರ್ಮು (Draupadi Murmu) ಸೇರಿದಂತೆ 500ಕ್ಕೂ ಹೆಚ್ಚು ಜಾಗತಿಕ ನಾಯಕರು ರಾಣಿಗೆ ಅಂತಿಮ ವಿದಾಯ ನೀಡಲು ಲಂಡನ್ ಉಪಸ್ಥಿತಿಯಿದ್ದಾರೆ. ಅಂತ್ಯಸಂಸ್ಕಾರದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ 10 ದಿನಗಳ ಶೋಕಾಚರಣೆ ಆಚರಿಸಲಾಗುತ್ತಿದ್ದು, ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ. ಬ್ರಿಟನ್ ರಾಜ 3ನೇ ಚಾರ್ಲ್ಸ್ (British King Charles III) ಅವರ ಪತ್ನಿ ಕ್ಯಾಮಿಲಾ (Camilla) ಸೇರಿದಂತೆ ರಾಣಿಯ 5 ಮಕ್ಕಳು, ವಿಲಿಯಂ, ಹ್ಯಾರಿ ಸೇರಿದಂತೆ 8 ಮೊಮ್ಮಕ್ಕಳು ಅವರ ಪತ್ನಿಯರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬ್ರಿಟನ್ನಲ್ಲಿ ಸಾವಿರಾರು ಪೊಲೀಸರು, ಸೇನಾ ಅಧಿಕಾರಿಗಳನ್ನು ನೇಮಿಸಿ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರದ ಮುಖ್ಯಸ್ಥರು ಬಸ್ಗಳಲ್ಲಿ ರಾಣಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ ಬೈಡೆನ್ಗೆ ತಮ್ಮ ವಿಶೇಷ ಭದ್ರತಾ ವಾಹನ ‘ಬೀಸ್ಟ್’ನಲ್ಲಿ ಬರಲು ಅನುಮತಿ ನೀಡಲಾಗಿದೆ.
ಅಂತ್ಯಸಂಸ್ಕಾರ ಹೇಗೆ?
ಪ್ರಸ್ತುತ ಸಂಸತ್ನ ವೆಸ್ಟ್ಮಿನಿಸ್ಟರ್ ಹಾಲ್ನಲ್ಲಿ (Westminster Hall) ರಾಣಿಯ ಶವಪೆಟ್ಟಿಗೆ ಇರಿಸಲಾಗಿದ್ದು, ಅದನ್ನು ರಾಯಲ್ ಸ್ಟಾಂಡರ್ಡ್ನಲ್ಲಿ ಸುತ್ತಿ ಮೇಲೆ ಕೊಹಿನೂರ್ ವಜ್ರವಿರುವ (Kohinoor diamond) ಕಿರೀಟವನ್ನಿಡಲಾಗಿದೆ. ಇದನ್ನು ಇಂದು ಭಾರತೀಯ ಕಾಲಮಾನದಂತೆ ಕುದುರೆಗಳಿಂದ ಎಳೆಯಲ್ಪಡುವ ಗನ್ ಕ್ಯಾರೇಜ್ನಲ್ಲಿಟ್ಟು ಮೆರವಣಿಗೆ ಮೂಲಕ ವೆಸ್ಟ್ಮಿನಿಸ್ಟರ್ ಅಬೆಗೆ ಸಾಗಿಸಲಾಗುತ್ತಿದೆ. ಕಳೆದ ವರ್ಷ ಮೃತಪಟ್ಟ ಅವರ ಪತಿ ಪ್ರಿನ್ಸ್ ಫಿಲಿಪ್ (Prince Philip) ಪಕ್ಕದಲ್ಲೇ ಸಮಾಧಿ ಮಾಡಲಾಗುವುದು
ಸಿನೆಮಾ ಥಿಯೇಟರ್ಗಳಲ್ಲಿ ನೇರ ಪ್ರಸಾರ
ರಾಣಿಯ ಅಂತ್ಯ ಸಂಸ್ಕಾರ ವೀಕ್ಷಣೆಗೆ ಬ್ರಿಟನ್ನಾದ್ಯಂತ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ನಗರಗಳ ಆಯಕಟ್ಟಿನ ಸ್ಥಳಗಳಲ್ಲಿ ಬೃಹತ್ ಪರದೆಗಳನ್ನು ಅಳವಡಿಸಿ ಅಲ್ಲಿ ವೆಸ್ಟ್ಮಿನಿಸ್ಟರ್ ಅಬೆಯಲ್ಲಿ ನಡೆಯುವ ಅಂತ್ಯಸಂಸ್ಕಾರ ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡಲಾಗುವುದು. ಜೊತೆಗೆ ಬಹುತೇಕ ಎಲ್ಲಾ ಸಿನೆಮಾ ಥಿಯೇಟರ್ಗಳಲ್ಲೂ ಬೆಳಗ್ಗೆಯಿಂದ ರಾತ್ರಿಯವರೆಗೂ ಅಂತ್ಯಸಂಸ್ಕಾರ ಪ್ರಕ್ರಿಯೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
500 ವಿವಿಐಪಿಗಳ ಆಗಮನ ಭಾರೀ ಭದ್ರತಾ ಸವಾಲು
ರಾಣಿ ಎಲಿಜಬೆತ್ ಅಂತ್ಯಸಂಸ್ಕಾರಕ್ಕೆ ವಿಶ್ವದ ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಿಗಳು, ರಾಜರು, ರಾಣಿಯರು, ಸಚಿವರು ಸೇರಿದಂತೆ 500ಕ್ಕೂ ಹೆಚ್ಚು ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಲಂಡನ್ನಲ್ಲಿ ಹಿಂದೆಂದೂ ಕಾಣದ ಭದ್ರತೆ ಒದಗಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಒಂದೇ ಸ್ಥಳದಲ್ಲಿ ಇಷ್ಟು ಪ್ರಮಾಣದ ಗಣ್ಯರು ಸೇರುತ್ತಿರುವ ಕಾರಣ, ಜಾಗತಿಕ ನಾಯಕರಿಗೆ ಭದ್ರತೆ ಒದಗಿಸುವುದು ದೊಡ್ಡ ಸವಾಲು ಎಂದು ಲಂಡನ್ ಮೇಯರ್ ಸಾದಿಕ್ ಖಾನ್ (London Mayor)ತಿಳಿಸಿದ್ದಾರೆ.
ಲಂಡನ್ ಭದ್ರತೆಗೆ 43 ಪೋಲಿಸ್ ಪಡೆಗಳು ಭಾಗಿಯಾಗಲಿದ್ದು 10000 ಕ್ಕೂ ಹೆಚ್ಚು ಪೋಲಿಸರು ನಿಯೋಜನೆಗೊಂಡಿದ್ದಾರೆ. ಅಂತಿಮ ಮೆರವಣಿಗೆಯಲ್ಲಿ ನೂರಾರು ಮಾರ್ಷಲ್ಗಳು ಮತ್ತು ಸಶಸ್ತ್ರ ಪಡೆಗಳ ಸದಸ್ಯರು ಸಹಕರಿಸಲಿದ್ದಾರೆ. ಕಟ್ಟಡಗಳ ಮೇಲ್ಭಾಗಗಳಲ್ಲಿ ಪೋಲಿಸರು, ರಸ್ತೆಗಳಲ್ಲಿ ಶ್ವಾನದಳ, ಥೇಮ್ಸ್ ನದಿ (River Thames) ಸಮೀಪದಲ್ಲಿ ಜಲಸೇನೆಯ ಅಧಿಕಾರಿಗಳು ಮತ್ತು ಅಶ್ವದಳದ ಪೋಲಿಸರನ್ನೊಳಗೊಂಡ ರಕ್ಷಣಾ ವ್ಯವಸ್ಥೆ ಇರಲಿದೆ. ಲಂಡನ್ ಕೇಂದ್ರಭಾಗದಲ್ಲಿ ಡ್ರೋನ್ ಹಾರಾಟವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದ್ದು , ವಿಮಾನಗಳ ಶಬ್ದದಿಂದ ಮೆರವಣಿಗೆಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 32 ಕಿ.ಮೀ ವರೆಗೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ.