ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ ಇನ್ನೂ ತನಿಖೆಯಲ್ಲಿರೂವಾಗ್ಲೇ ಇದೀಗ ಬೋವಿ ನಿಗಮದಲ್ಲೂ ಅಕ್ರಮ ಹಣ ವರ್ಗಾವಣೆ ನಡೆದಿದ್ದು, ಪ್ರಕರಣ ಸಂಬಂಧ ಇದೀಗ ಕಚೇರಿ ಅಧೀಕ್ಷಕ ಪಿ.ಡಿ.ಸುಬ್ಬಪ್ಪ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಹೌದು 2021-22ನೇ ಸಾಲಿನಲ್ಲಿ ಬೋವಿ ಸಮುದಾಯದ ಉದ್ಯಮಿಗಳಿಗೆ ನಿಗಮವು ನೀಡುವ ಆರ್ಥಿಕ ಸಾಲ ಯೋಜನೆಯಲ್ಲಿ ಕೋಟ್ಯಂತರ ಮೊತ್ತದ ಅಕ್ರಮ ನಡೆದೆ ಎಂದು ಆರೋಪಿಸಿ ಬೆಂಗಳೂರಿನ ಸಿದ್ದಾಪುರ, ಕಲಬುರಗಿ ಜಿಲ್ಲೆಯ ಕಾಳಗಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು, ಕೆಲ ದಿನಗಳ ಹಿಂದೆ ಸಿಐಡಿ ತನಿಖೆಗೆ ಆದೇಶಿಸಿತ್ತು. ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು ನಿಗಮದ ಅಧೀಕ್ಷಕ ಸುಬ್ಬಪ್ಪರನ್ನು ಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ 4 ದಿನಗಳು ಕಸ್ಟಡಿಗೆ ಪಡೆದಿದ್ದಾರೆ.
ಸಾಲ ಮಂಜೂರಾತಿ ಮಾಡಿರುವ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ನಿಗಮದ ಅಧಿಕಾರಿಗಳು ಸಹ ಕೋಟ್ಯಂತರ ರೂ. ವಂಚಿಸಿರುವ ಆರೋಪ ಕೇಳಿ ಬಂದಿತ್ತು. ಆರೋಪ ಕೇಳಿ ಬಂದ ಕೂಡಲೇ ಸುಬ್ಬಪ್ಪ, 200ಕ್ಕೂ ಹೆಚ್ಚಿನ ಕಡತಗಳನ್ನು ಕಳವು ಮಾಡಿ ಬಚ್ಚಿಟ್ಟಿದ್ದರು. ಈಗ ಆ ಕಡತಗಳನ್ನು ಮರಳಿ ಪಡೆಯಲಾಗುತ್ತಿದೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2021-23ವರೆಗೆ ನಿಗಮದ ಕೇಂದ್ರ ಕಚೇರಿಯ ಅಧೀಕ್ಷಕರಾಗಿ ಸುಬ್ಬಪ್ಪ ಕಾರ್ಯನಿರ್ವಹಿಸಿದ್ದರು. ನಿಗಮದಿಂದ ಆ ಸಮುದಾಯದ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಸಾಲ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಉದ್ಯಮಶೀಲಾ ಮತ್ತು ನೇರ ಸಾಲ ಯೋಜನೆಗಳಲ್ಲಿ ಆರ್ಥಿಕ ನೆರವು ಕೊಡಿಸುವುದಾಗಿ ನಂಬಿಸಿ ಮಧ್ಯವರ್ತಿಗಳು ಲಕ್ಷಾಂತರ ರೂ. ಪಡೆದು ವಂಚಿಸಿದ್ದರು.