ಬೆಂಗಳೂರು : ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಸಿಹಿ ನೀಡಿದ್ದು, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಅನ್ವಯ ವಾಗುವಂತೆ ರಾಜ್ಯ ಸಿವಿಲ್ ಸೇವೆಗಳ ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಕಲ್ಪಿಸುವ ಕುರಿತ ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು -2024ರ ಕರಡಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ತನ್ಮೂಲಕ ರಾಜ್ಯಪತ್ರದ ಅಧಿಸೂಚನೆ ಪ್ರಕಟಿಸಿ 15 ದಿನಗಳೊಳಗಾಗಿ ಸಾರ್ವಜನಿಕರಿಂದ ಆಕೇಪಣೆ ಆಹ್ವಾನಿಸಲು ಹಾಗೂ ಗುರುತರ ಆಕ್ಷೇಪಣೆ ಬಾರದಿದ್ದರೆ ಮತ್ತೆ ಸಚಿವ ಸಂಪುಟಕ್ಕೆ ಮಂಡಿಸದೆ ಮೀಸಲಾತಿ ಜಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸಂಪುಟ ಅನುಮತಿ ನೀಡಿದೆ.
ಮಾನದಂಡವೇನು?:
ರಾಷ್ಟ್ರಮತ್ತು ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಗಣನೀಯ ಸಾಧನೆ ಮಾಡಿದಪ್ರತಿಭಾವಂತ ಕ್ರೀಡಾಪಟುಗಳಿಗೆಶೇ.2ರಷ್ಟು ಸಮತಳ ಮೀಸಲಾತಿ ದೊರೆಯಲಿದೆ. ಇದಕ್ಕಾಗಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) 1977ರ ನಿಯಮ 9ಕ್ಕೆ ತಿದ್ದುಪಡಿ ತರಲು ತೀರ್ಮಾನ ಮಾಡಲಾಗಿದೆ. ತನ್ಮೂಲಕ ಪ್ರಸ್ತುತ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯಲ್ಲಿನ ನೇಮಕಾತಿಗೆ ಮಾತ್ರ ಸೀಮಿತವಾಗಿದ್ದ ಕ್ರೀಡಾ ಮೀಸಲಾತಿ ಎಲ್ಲಾ ಇಲಾಖೆಗಳಿಗೂ ಅನ್ವಯವಾಗಲಿದೆ.