ಬೆಂಗಳೂರು : ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತು ಆಗ್ತಿದೆ. ಇದೀಗ ಮಹಿಳಾ ಸಹೋದ್ಯೋಗಿಗಳ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಮಾಜಿ ಉದ್ಯೋಗಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಆಶಿಶ್ ಮೊನ್ನಪ್ಪ ಎಂದು ತಿಳಿದುಬಂದಿದೆ. ಮಡಿಕೇರಿಯ ಈತ ಹೊಸೂರಿನಲ್ಲಿ ಹೆಂಡತಿ-ಮಕ್ಕಳೊಂದಿಗೆ ವಾಸವಾಗಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಜಕ್ಕೂರಿನ ಬಾಡಿಗೆ ಮನೆಯೊಂದರಲ್ಲಿ ಒಬ್ಬನೇ ನೆಲೆಸಿದ್ದ. ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದ.
2023ರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಆರೋಪಿ, ಕಳೆದ ಜನವರಿಯಲ್ಲಿ ಕೆಲಸ ತೊರೆದಿದ್ದ. ಬೇರೆ ಕಂಪನಿಗಳಿಗೆ ರೆಸ್ಯೂಮ್ ಕಳುಹಿಸಲು ಹಳೆ ಕಂಪನಿಯ ಮಹಿಳಾ ಸಹೋದ್ಯೋಗಿಯಿಂದ ಲ್ಯಾಪ್ಟಾಪ್ ಪಡೆದುಕೊಂಡಿದ್ದ. ಕೆಲ ದಿನಗಳ ನಂತರ ಆರೋಪಿಯು ಸ್ನೇಹಿತೆಗೆ ಲ್ಯಾಪ್ಟಾಪ್ ವಾಪಸ್ ನೀಡಿದ್ದ. ಲ್ಯಾಪ್ಟಾಪ್ ನೀಡುವಾಗ ಅಸಭ್ಯವಾಗಿ ಮಹಿಳೆಯರ ಫೋಟೋಗಳನ್ನು ಎಡಿಟ್ ಮಾಡಿಟ್ಟುಕೊಂಡಿದ್ದ ಫೋಲ್ಡರ್ ಡಿಲೀಟ್ ಮಾಡುವುದನ್ನು ಮರೆತಿದ್ದ.
ಸ್ನೇಹಿತೆಯು ಲ್ಯಾಪ್ಟಾಪ್ ನೋಡಿದಾಗ ಕಂಪನಿಯ ಸಹೋದ್ಯೋಗಿಗಳ ಅಶ್ಲೀಲ ಮಾರ್ಫ್ ಚಿತ್ರಗಳನ್ನು ಕಂಡು ಶಾಕ್ ಆಗಿದ್ದರು. ಈ ಬಗ್ಗೆ ಕರೆ ಮಾಡಿ ಕರೆಸಿಕೊಂಡು ಪ್ರಶ್ನಿಸಿದಾಗ, ಆರೋಪಿ ಆತಂಕಗೊಂಡು ಸ್ಥಳದಲ್ಲೇ ಮೊಬೈಲ್ ಬಿಟ್ಟು ಪರಾರಿಯಾಗಿದ್ದ. ಈ ಹಿನ್ನೆಲೆಯಲ್ಲಿ ದೂರು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.