ಬೆಂಗಳೂರು : ಗಂಡನನ್ನು ಬಿಟ್ಟು ತನ್ನ ಜೊತೆ ಇರಲು ಒಪ್ಪದಿದ್ದಕ್ಕೆ ವಿವಾಹಿತ ಮಹಿಳೆಯನ್ನು ಕೊಂದು ಪ್ರಿಯಕರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರ ಹಳ್ಳಿಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಮೊವುಹಾ ಮಂಡಲ್ (26) ಎಂದು ತಿಳಿದುಬಂದಿದೆ. ಇನ್ನೂ ಮಹಿಳೆಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಮಿಥುನ್ ಮಂಡಲ್ (40) ಎನ್ನಲಾಗಿದೆ. ಗಂಡನನ್ನ ತೊರೆದು ತನ್ನೊಂದಿಗೆ ಬರದಿದ್ದಕ್ಕೆ ಸಿಟ್ಟಿನಿಂದ ಕೊಲೆ ಮಾಡಿದ್ದಾನೆ. ಬಳಿಕ ಬಂಧನ ಭೀತಿಯಿಂದ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಟಿಪಿಎಲ್ ಬಳಿ ಮೊಹುವಾ ವಾಸವಾಗಿದ್ದಳು. ಆರು ತಿಂಗಳ ಹಿಂದೆ ಪರಿಚಿತರಾಗಿದ್ದ ಮೊವುಹಾ ಮಂಡಲ್‌ಗೆ ತನ್ನನ್ನ ಪ್ರೀತಿಸುವಂತೆ ಮಿಥುನ್ ಕೇಳಿಕೊಂಡಿದ್ದ. ತನಗೆ ಮದುವೆಯಾಗಿದೆ ಎಂದು ಹೇಳಿದರೂ ಗಂಡನನ್ನ ತೊರೆದು ತನ್ನ ಜೊತೆಯಿರುವಂತೆ ಒತ್ತಡ ಹೇರಿದ್ದ. ಈತನ ಒತ್ತಡಕ್ಕೆ ಮಣಿಯದೆ ಆತನೊಂದಿಗೆ ಗಲಾಟೆ ಮಾಡಿಕೊಂಡಿದ್ದಳು. ಮಿಥುನ್ ಇದರಿಂದ ತಲೆಕೆಡಿಸಿಕೊಂಡು ಕೆಲಸಕ್ಕೆ ಹೋಗುತ್ತಿರಲಿಲ್ಲ. ಖರ್ಚಿಗಾಗಿ ಸ್ನೇಹಿತರಿಂದ ಕೈಸಾಲ ಪಡೆದಿದ್ದ.
ಗಂಡನನ್ನು ಬಿಟ್ಟು ತನ್ನ ಜೊತೆ ಇರಲು ಒತ್ತಾಯಿಸಿದರು ಕೂಡ ಆಕೆ ಒಪ್ಪದಿದ್ದಾಗ, ಆಕೆಯ ಮೇಲೆ ಹಗೆತನ ಸಾಧಿಸಿ ಬುಧವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಆಕೆ ಮನೆಗೆ ನುಗ್ಗಿ ಕತ್ತು ಸೀಳಿ ಮಿಥುನ್ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ತನ್ನನ್ನು ಬಂಧಿಸುತ್ತಾರೆ ಎಂದು ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಕುರಿತಂತೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.