ಚಿಕ್ಕಮಗಳೂರು: ಮಹಿಳೆ ಒಬ್ಬರು ಒಂಟಿಯಾಗಿರುವುದನ್ನು ಗಮನಿಸಿ ಅವರ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯ ಹುಣಸೇಮಕ್ಕಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಹುಣಸೇಮಕ್ಕಿ ಗ್ರಾಮದ ನಿವಾಸಿ ಲಲಿತಾ(43) ಬರ್ಬರವಾಗಿ ಹತ್ಯೆಯಾದ ದುರ್ದೈವಿ ಎಂದು ಹೇಳಲಾಗುತ್ತಿದೆ. ಕಳೆದ ಅನೇಕ ವರ್ಷಗಳಿಂದ ಈ ಮಹಿಳೆ ಹುಣಸೇಮಕ್ಕಿ ಗ್ರಾಮದಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು ಎನ್ನಲಾಗಿದೆ.ಮಹಿಳೆಯನ್ನು ಬುಧವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ಮನೆಗೆ ನುಗ್ಗಿ ಕತ್ತು ಸೀಳಿ ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ.
ಸ್ಥಳಕ್ಕೆ ಆಲ್ದೂರು ಪೊಲೀಸರು ಭೇಟಿ ನೀಡಿ ಸ್ಥಳದ ಮಹಜರು ನಡೆಸಿದ್ದು, ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಆಲ್ದೂರು ಪೊಲೀಸರು ಹತ್ಯೆ ಆರೋಪಿಗಳ ಸುಳಿವು ಪತ್ತೆಗೆ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.