ಬೆಳಗಾವಿ : ಬೆಳಗಾವಿಯಲ್ಲಿ ಹಾಡಹಗಲೇ ಭೀಕರವಾದ ಕೊಲೆಯಾಗಿದ್ದು, ಅಪಾರ್ಟ್ಮೆಂಟ್ಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ಹತ್ಯೆಗೈದ ಘಟನೆ ಜಿಲ್ಲೆಯ ಗಣೇಶಪುರದ ಲಕ್ಷ್ಮಿ ನಗರದಲ್ಲಿ ನಿನ್ನ ಸಂಜೆ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಲಕ್ಷ್ಮಿ ನಗರದ ನಿವಾಸಿ ಅಂಜನಾ ಅಜೀತ ದಡ್ಡೀಕರ್(53) ಎಂದು ತಿಳಿದುಬಂದಿದೆ. ಅಪಾರ್ಟ್ಮೆಂಟ್ ಮನೆಯಲ್ಲಿ ಗಂಡ-ಹೆಂಡತಿ ಮಾತ್ರ ವಾಸವಾಗಿದ್ದರು. ಪತಿ ಅಜಿತ್ ಆಟೋ ರಿಕ್ಷಾ ನಡೆಸುತ್ತಿದ್ದಾರೆ. ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಪತ್ನಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ನಿರಂಜನರಾಜೇ ಅರಸ್, ಕ್ಯಾಂಪ್ ಪೊಲೀಸ್ ಠಾಣೆ ಸಿಪಿಐ ಅಲ್ತಾಫ್ ಮುಲ್ಲಾ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ್ದಾರೆ. ಬೆಳಗಾವಿ ಕ್ಯಾಂಪ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.