ಬೆಂಗಳೂರು : ನಿನ್ನೆಯಿಂದ ವಿಧಾನಸಭೆಯಲ್ಲಿ ಸದ್ಯಕ್ಕೆ ಹನಿಟ್ರ್ಯಾಪ್ ವಿಚಾರ ಭಾರಿ ಚರ್ಚೆ ಆಗುತ್ತಿದ್ದು, ನಿನ್ನೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಹಕಾರ ಸಚಿವ ಕೆ.ಎನ್ ರಾಜಣ್ಣ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದರು. ಬಳಿಕ ಕೆ.ಎನ್ ರಾಜಣ್ಣ ನನ್ನ ಮೇಲೆ ಹನಿಟ್ರ್ಯಾಪ್ ಮಾಡಿದ್ದು ನಿಜ. ಆದರೆ ನಾನು ಅದಕ್ಕೆ ಬಿದ್ದಿಲ್ಲ. ಈ ಕುರಿತು ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಈ ಒಂದು ಚರ್ಚೆಯ ವೇಳೆ ಶಾಸಕ ಮುನಿರತ್ನ ರೋಷಾವೇಶದಲ್ಲಿ ದೇವರ ಫೋಟೋ ತೋರಿಸಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಭಾವುಕರಾಗಿದ್ದರು. ಆದರೆ ಇದೀಗ ಈ ಹಿಂದೆ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಮಹಿಳೆ ಮುನಿರತ್ನ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಹೆತ್ತ ಮಗಳ ವಿರುದ್ಧವೇ ಮುನಿರತ್ನ ಹನಿಟ್ರ್ಯಾಪ್ ಮಾಡಿಸಿದ್ದ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುನಿರತ್ನ ಮಗಳಿಗೆ ಮದುವೆಯಾದ ನಂತರವೂ ರಂಜಿತ್ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು, ಹೀಗಾಗಿ ಮುನಿರತ್ನ ಮಗಳ ವಿರುದ್ಧವೇ ಹನಿಟ್ರ್ಯಾಪ್ ಮಾಡಿಸಿ, ಖಾಸಗಿ ವಿಡಿಯೊ ಮಾಡಿಸಿದ್ದ ಎಂದು ಹೇಳಿದ್ದಾರೆ. ಅಲ್ಲದೆ 15 ವರ್ಷದ ಅಪ್ರಾಪ್ತೆಯ ಬಡತನದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಆಕೆಯ ಮೇಲು ಲೈಂಗಿಕ ದೌರ್ಜನ್ಯ ಎಸಗಿದ ಮುನಿರತ್ನಾರನ್ನು ಯಾವುದೇ ಕಾರಣಕ್ಕೂ ವಿಧಾನಸಭೆಗೆ ಪ್ರವೇಶಿಸಲು ಅವಕಾಶ ಕೊಡಬಾರದು ಎಂದು ಆಗ್ರಹಿಸಿದ್ದಾರೆ.