ಹಾವೇರಿ : ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ ಈ ಹಿನ್ನೆಲೆಯಲ್ಲಿ ಇಂದು ಹಾವೇರಿ ಜಿಲ್ಲೆಯ ಸವಣೂರಲ್ಲಿ ಕಾಂಗ್ರೆಸ್ ಕೃತಜ್ಞತಾ ಸಮಾವೇಶ ಹಮ್ಮಿಕೊಂಡಿದೆ. ಈ ಒಂದು ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಬಿಟ್ಟು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ 10 ಕೆಜಿ ಅಕ್ಕಿ ಕೊಡುತ್ತಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು.
ಇಂದು ಹಾವೇರಿ ಜಿಲ್ಲೆಯ ಸವಣೂರಲ್ಲಿ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಮ್ಮ ರಾಜ್ಯದಲ್ಲಿ ಅಷ್ಟೇ 10 ಕೆಜಿ ಅಕ್ಕಿ ಕೊಡುತ್ತಿದ್ದೇವೆ. 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಗೆ ತಗುಲುವ ಹಣ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ಇಟ್ಟುಕೊಂಡು ಸಹ ಅಕ್ಕಿ ಕೊಡಲಿಲ್ಲ. ಬಿಜೆಪಿ ಅಧಿಕಾರ ಇರುವ ರಾಜ್ಯದಲ್ಲಿ 10 ಕೆಜಿ ಅಕ್ಕಿ ಕೊಡುತ್ತಾರಾ? ಬಿಜೆಪಿ 10 ಕೆಜಿ ಅಕ್ಕಿ ಕೊಡ್ದಿದ್ರೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು.
ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅರ್ಹ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಕಡಿಮೆ ಮಾಡಲ್ಲ. ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳಲ್ಲ ಅರ್ಹ ಇರುವ ಎಲ್ಲರಿಗೂ ಅಕ್ಕಿ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
5 ಗ್ಯಾರಂಟಿ ಯೋಜನೆ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. ಭಾವೈಕ್ಯತೆ ಕಾಪಾಡಿಕೊಂಡು ಬಂದಂತಹ ಕ್ಷೇತ್ರ ಶಿಗ್ಗಾಂವಿ. ಮೂರು ದಿನ ಶಿಗ್ಗಾವಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಈ ಹಿಂದೆ ಬಸವರಾಜ ಬೊಮ್ಮಾಯಿ 35 ಸಾವಿರ ಮತಗಳಿಂದ ಗೆದ್ದಿದ್ದರು. ಈ ಬಾರಿ ಪಠಾಣ್ 14 ಸಾವಿರ ಮತಗಳಿಂದ ಗೆದ್ದಿದ್ದಾರೆ. ಆದರೆ ಪಠಣ ಗೆದ್ದಿದ್ದು 50 ಸಾವಿರ ಮತಗಳಿಂದ. ನಾವು ಮೂರೂ ಕ್ಷೇತ್ರ ಗೆದ್ದಿದ್ದೇವೆ ಎಂದು ತಿಳಿಸಿದರು.