ಬೆಂಗಳೂರು : ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ ನೀಡಲಾಗಿದೆ ಎಂಬ ಆಧಾರದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಜಾಮೀನು ಕೇಳುವಂತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಎರಡನೇ ಬಾರಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಸಿರುವ ಅತ್ಯಾಚಾರ ಘಟನೆ 2021ರಲ್ಲಿ ನಡೆದಿದೆ. ಆದಾದ ನಾಲ್ಕೂವರೆ ವರ್ಷಗಳ ನಂತರ ದೂರು ದಾಖಲಿಸಲಾಗಿದೆ. ಅದಕ್ಕೆ ದೂರುದಾರೆ ಯಾವುದೆ ವಿವರಣೆ ನೀಡಿಲ್ಲ. ಹೀಗಿದ್ದರೂ ಅರ್ಜಿದಾರರು ಜೈಲಿನಲ್ಲಿ ಮುಂದುವರಿಯುವುದು ಹೇಗೆ? ಆದ್ದರಿಂದ ಪ್ರಜ್ವಲ್‌ಗೆ ಜಾಮೀನು ನೀಡಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣದ ಇತರೆ ಆರೋಪಿಗಳ ವಿರುದ್ಧ ತಡೆಯಾಜ್ಞೆ ಇದ್ದರೂ ಪ್ರಜ್ವಲ್ ರೇವಣ್ಣ ವಿರುದ್ಧ ನಂಬಲರ್ಹ ಸಾಕ್ಷಿಗಳಿವೆ. ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ ನೀಡಲಾಗಿದೆ ಎಂಬ ಆಧಾರದಲ್ಲಿ ಪ್ರಮುಖ ಆರೋಪಿ ಜಾಮೀನು ಕೋರಲಾಗದು ಎಂದು ಕೋರ್ಟ್ ವಿಚಾರಣೆಯನ್ನು ಏ.15ಕ್ಕೆ ಮುಂದೂಡಿತು.