ಚಿತ್ರದುರ್ಗ : ವರದಕ್ಷಿಣೆಯ ಕಿರುಕುಳಕ್ಕೆ ಬೇಸತ್ತ ಗೃಹಿಣಿ ಒಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದರಿಂದ ನೊಂದ ಪತಿ ತಾನು ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಗಿರಿಜಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಇನ್ನು ನೇಣಿಗೆ ಶರಣಾದ ಗೃಹಿಣಿಯನ್ನು ಆಂಧ್ರಪ್ರದೇಶ ಮೂಲದ ಪ್ರವಲ್ಲಿಕ (25) ಎಂದು ತಿಳಿದುಬಂದಿದ್ದು, ಸುದರ್ಶನ್ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ ಪತಿ. ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಸುದರ್ಶನ್ ಅಸ್ವಸ್ಥಗೊಂಡಿದ್ದು, ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದರ್ಶನ್ ರೆಡ್ಡಿ ಹಾಗೂ ಪ್ರವಲ್ಲಿಕ 1 ವರ್ಷದ ಹಿಂದೆ ಮದುವೆ ಆಗಿದ್ದರು. ಸುದರ್ಶನ್ ಮೊಳಕಾಲ್ಮೂರಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಗಿರಿಜಯ್ಯನಹಟ್ಟಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಆದರೆ ಸುದರ್ಶನ್ ಕುಟುಂಬಸ್ಥರು ಪ್ರತಿದಿನ ಪ್ರವಲ್ಲಿಕಾಗೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇನ್ನು ಪ್ರಕರಣ ಸಂಬಂಧ ಪತಿ ಸುದರ್ಶನ್ ರೆಡ್ಡಿ, ಮಾವ ಶಿವಾ ರೆಡ್ಡಿ, ಅತ್ತೆ ರಾಜೇಶ್ವರಿ ಹಾಗೂ ಮತ್ತಿತರೆ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ. ಘಟನೆ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.