ಬೆಂಗಳೂರು : ಗೌರವ ಇಲ್ಲದ ಕಡೆ ನಾವು ಯಾಕೆ ಇರಬೇಕು. ರಾಜೀನಾಮೆ ಕೊಡುವುದಕ್ಕೂ ಹಿಂದೆಮುಂದೆ ನೋಡುವುದಿಲ್ಲ ಎಂದು ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವಿನಯ್ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಸೇರಿದರೆ ಅವರು ಸಚಿವರು. ಅವರೇನು ಮೇಲಿಂದ ಬಂದಿಲ್ಲ. ಸಚಿವರು ಮೊದಲು ಶಾಸಕರೇ ಅಲ್ವಾ? ಅದನ್ನು ಅರ್ಥ ಮಾಡಿಕೊಳ್ಳಿ ಅವರಿಗೂ ನೋಟಿಸ್ ಕೊಡಲೇಬೇಕಾಗುತ್ತದೆ. ಪ್ರಸಂಗ ಬಂದರೆ ದಾಖಲೆ ಕೊಡುತ್ತೇನೆ. ನಾನು ಭಯಪಡುವುದಿಲ್ಲ ಬಹಿರಂಗವಾಗಿಯೇ ಹೇಳುತ್ತೇನೆ. ಗೌರವ ಇಲ್ಲದ ಕಡೆ ನಾವು ಯಾಕೆ ಇರಬೇಕು ಎಂದು ಭೈರತಿ ಸುರೇಶ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಅನುದಾನ ಸಂಬಂಧ ಸಚಿವ ಬೈರತಿ ಸುರೇಶ್ ಜೊತೆಗೆ ಉಂಟಾಗಿರುವ ಜಟಾಪಟಿ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅಸಮಾಧಾನ ವ್ಯಕ್ತಪಡಿಸಿಲ್ಲ, ಪ್ರಸಂಗ ಬಂದರೆ ವ್ಯಕ್ತಪಡಿಸುತ್ತೇನೆ. ನಾನು ದುರಾಡಳಿತವನ್ನು ಸಹಿಸೋದಿಲ್ಲ. ನಮ್ಮ ಬೋರ್ಡ್ನಲ್ಲಿ ದುರಾಡಳಿತ ನಡೆಯುತ್ತಿದೆ. ಆ ಬೋರ್ಡ್ಗೆ ನಾನು ಹೆಡ್. ಆದರೆ ಅಲ್ಲಿ ವ್ಯವಸ್ಥೆ ಸರಿಯಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ದೆಹಲಿ ಹೋಗಿ ನಾಯಕರ ಭೇಟಿ ಮಾಡಿ ಭೈರತಿ ಸುರೇಶ್ ವಿರುದ್ದ ದೂರು ಸಲ್ಲಿಸಿದ್ದರು. ಇದೀಗ ಮತ್ತೊಮ್ಮೆ ಅವರ ವಿರುದ್ಧ ಬಹಿರಂಗವಾಗಿ ವಿನಯ್ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೌರವ ಇಲ್ಲದ ಕಡೆ ನಾವು ಏಕೆ ಇರಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜೀನಾಮೆ ಸುಳಿವು ನೀಡಿದ್ರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ನಾನು ದೆಹಲಿಗೆ ಹೋಗಿದ್ದು ನಿಜ. ಪಕ್ಷದ ಮುಖಂಡರಿಗೆ ಏನು ಹೇಳಬೇಕು ಅದನ್ನು ಹೇಳಿದ್ದೇನೆ. ಎಲ್ಲಾ ಕಂಪನಿಗಳ ಬಗ್ಗೆ ತನಿಖೆ ಆಗಬೇಕು. ಯಾವ ಕಂಪನಿಗಳು ಗೋಲ್ ಮಾಲ್ ಮಾಡಿವೆ ಅಂತಹ ಕಂಪನಿಗಳನ್ನು ಬ್ಲಾಕ್ ಲಿಸ್ಟ್ಗೆ ಹಾಕಲಿ. ತನಿಖೆಗೆ ಎಂದು ನಾನು ಪತ್ರ ಕೊಟ್ಟು ಎರಡುವರೆ ತಿಂಗಳು ಆಗಿದೆ. 10-15 ಕಂಪನಿಗಳು ಇದ್ದಾವೆ ಎಂದಿದ್ದಾರೆ.








