ರಾಮನಗರ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ 2 ಗಂಟೆ ವಿಚಾರಣೆ ಎದುರಿಸಿದ ಬಳಿಕ ಇದೀಗ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೇವೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಾವು ಇನ್ನೂ ಮೂರುವರೆ ವರ್ಷ ಅಧಿಕಾರದಲ್ಲಿ ಇರುತ್ತೇವೆ ಎಂದು ತಿಳಿಸಿದರು.
ಇದು ಹೊಸ ಸರ್ಕಾರ ರಚನೆ ಮಾಡುವ ಚುನಾವಣೆ ಅಲ್ಲ. ಯೋಗೇಶ್ವರ್ ಗೆದ್ದರೆ 136 ರಿಂದ 137 ಆಗುತ್ತೇವೆ. ನಾವು ಜನಪರ ಕಾರ್ಯಕ್ರಮ ಕೊಟ್ಟಿದ್ದೇವೆ. ನಮ್ಮನ್ನು ಗೆಲ್ಲಿಸಿದರೆ ನಮ್ಮ ಸರ್ಕಾರಕ್ಕೆ ಶಕ್ತಿ ಕೊಟ್ಟ ಹಾಗೆ ಆಗುತ್ತದೆ. ನಾವು ಇನ್ನೂ ಮೂರುವರೆ ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಜೆಡಿಎಸ್ ನವರು ಏನೆಲ್ಲಾ ನನ್ನ ಮೇಲೆ ಸುಳ್ಳು ಆರೋಪ ಮಾಡಿ ನನ್ನ ಮೇಲೆ ಮಸಿ ಬಳಿದು ನನ್ನನ್ನು ಅಧಿಕಾರದಿಂದ ತೆಗೆದುಹಾಕಿ ಮತ್ತೆ ಅವರು ಅಧಿಕಾರಕ್ಕೆ ಬರಬೇಕು ಎಂದು ಹವಣಿಸಿದರೆ ಅದು ಅವರ ಈ ದೃಷ್ಟ ಪ್ರಯತ್ನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಬಿಜೆಪಿಯವರು ಎಷ್ಟೇ ಆರೋಪಗಳನ್ನು ಮಾಡಲಿ. ಜೆಡಿಎಸ್ ನವರು ಎಷ್ಟೇ ಆರೋಪಗಳನ್ನು ಮಾಡಲಿ ಸತ್ಯ ನಮ್ಮ ಪರವಾಗಿ ಇದೆ ಎಂದರು.
ನಾನು ಮುಖ್ಯಮಂತ್ರಿ ಆಗಿ 40 ವರ್ಷಗಳಾಯಿತು. 2 ಬಾರಿ ಸಿಎಂ 2 ಬಾರಿ ಡಿಸಿಎಂ ಹಾಗೂ 2 ಬಾರಿ ವಿರೋಧ ಪಕ್ಷದ ನಾಯಕನಾಗಿದ್ದೇನೆ. ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿ ನಾನು ಇದ್ದರೂ ಕೂಡ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ನಾವು ನುಡಿದಂತೆ ನಡೆದಿದ್ದೇವೆ, ಕೊಟ್ಟಮಾತಿನಂತೆ ನಡೆದಿದ್ದೇವೆ.
ಚುನಾವಣೆ ನಡೆಯುತ್ತಿರುವುದು ಒಂದು ಕಡೆ ಕೊಟ್ಟ ಮಾತಿನಂತೆ ನಡೆಯುತ್ತಿರುವ ಪಕ್ಷ, ಇನ್ನೊಂದು ಕಡೆ ಜೆಡಿಎಸ್ ಬಿಜೆಪಿ ನಡುವೆ. ಇಬ್ಬರು ಸೇರಿ ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಏನನ್ನು ಮಾಡಲಿಲ್ಲ. 2018ರಲ್ಲಿ ಬಿಜೆಪಿಯವರು 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಶೇಕಡ 10ರಷ್ಟು ಸಹ ಈಡೇರಿಸೋಕೆ ಸಾಧ್ಯವಾಗಲಿಲ್ಲ ಎಂದರು.