ಚಿತ್ರದುರ್ಗ : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ್ದು, ಹತ್ಯೆಯಾದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಭಾವುಕರಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೂ ಕಾನೂನು, ನ್ಯಾಯಾಂಗದ ಮೇಲೆ ನಂಬಿಕೆ ಇದೆ. ದರ್ಶನ್ ಜಾಮೀನು ರದ್ದು ಆಗಿರುವುದು ನಮಗೆ ಕಾನೂನಿನ ಬಗ್ಗೆ ಬಲವಾದ ನಂಬಿಕೆಯಿದೆ ಎಂದು ಹೇಳಿದ್ದಾರೆ.
ನಟ ದರ್ಶನ್ ಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ನೀಡಿದ್ದು, ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ 2024 ಡಿಸೆಂಬರ್ ನಲ್ಲಿ ಹೈಕೋರ್ಟ್ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿತ್ತು. ಈ ವೇಳೆ ಸರ್ಕಾರ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಜಾಮೀನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದು, ಇದೀಗ ನ್ಯಾ.ಜೆ.ಬಿ ಪರ್ದಿವಾಲಾ ಹಾಗೂ ನ್ಯಾ.ಆರ್.ಮಹದೇವನ್ ಅವರ ಪೀಠವು ಇದೀಗ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ನ್ಯಾ.ಆರ್. ಮಹಾದೇವನ್ ತೀರ್ಪು ಓದಿ, ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ್ದಾರೆ ಎಂದು ಹೇಳಿ ಜಾಮೀನು ರದ್ದುಗೊಳಿಸಿದರು. ಕಳೆದ ವಿಚಾರಣೆಯ ವೇಳೆ ನಟ ದರ್ಶನ್ ಪರ ವಕೀಲರು ಹಾಗೂ ಸರ್ಕಾರದ ಪರ ವಕೀಲರು ಸುಧೀರ್ಘವಾಗಿ ವಾದ ಮಂಡನೆ ಮಾಡಿದ್ದರು. ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುವಾಗ ದರ್ಶನ್ ಸ್ಥಳದಲ್ಲಿ ಇದ್ದಿದ್ದು, ರೇಣುಕಾ ಸ್ವಾಮಿ ಹಲ್ಲೆ ಮಾಡಿರುವ ವಿಡಿಯೋ ಮಾಡಿದ್ದು, ಹಾಗೂ ಬಟ್ಟೆಯ ಮೇಲೆ ರಕ್ತದ ಕಲೆಗಳು ಸೇರಿದಂತೆ ಎಲ್ಲಾ ಸಾಕ್ಷಿಗಳನ್ನು ಸರ್ಕಾರದ ಪರ ವಕೀಲರು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮುಂದೆ ವಿವರಿಸಿದ್ದರು.
ಇಂದು ವಾದ ಪ್ರತಿವಾದಗಳನ್ನು ಸಂಪೂರ್ಣವಾಗಿ ಆಲಿಸಿದ ಬಳಿಕ, ನ್ಯಾ.ಜೆ.ಬಿ ಪರ್ದಿವಾಲಾ ಹಾಗೂ ನ್ಯಾ.ಆರ್.ಮಹದೇವನ್ ಅವರ ಪೀಠವು, ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನು ರದ್ದುಗೊಳಿಸಿ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ ಈ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲೇ ಫಿಕ್ಸ್ ಎಂಬಂತಾಗಿದೆ.