ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಅಡಿಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ 112 ವಾರ್ಡ್ ಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿದೆ.
ಪ್ರಮುಖ ಅಂಕಿ-ಅಂಶಗಳು
ಪಾಲಿಕೆಯ ಒಟ್ಟು 112 ವಾರ್ಡ್‌ಗಳಲ್ಲಿ ವಿವಿಧ ವರ್ಗಗಳಿಗೆ ಹಂಚಿಕೆಯಾಗಿರುವ ಸ್ಥಾನಗಳ ವಿವರ ಹೀಗಿದೆ:
| ವರ್ಗ | ಒಟ್ಟು ಸ್ಥಾನಗಳು | ಮಹಿಳಾ ಮೀಸಲಾತಿ (ಒಟ್ಟು ಸ್ಥಾನಗಳ ಪೈಕಿ) |
| ಸಾಮಾನ್ಯ ವರ್ಗ | 64 | 32 |
| ಹಿಂದುಳಿದ ವರ್ಗ ‘ಅ’ | 30 | 15 |
| ಹಿಂದುಳಿದ ವರ್ಗ ‘ಬ’ | 07 | 03 |
| ಅನುಸೂಚಿತ ಜಾತಿ (SC) | 09 | 04 |
| ಅನುಸೂಚಿತ ಪಂಗಡ (ST) | 02 | 01 |
| ಒಟ್ಟು | 112 | 55 |
ಸರ್ಕಾರವು ಜನವರಿ 08, 2026 ರಂದು ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯು ಸ್ವೀಕೃತವಾದ ಎಲ್ಲಾ ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅಗತ್ಯವಿದ್ದ ಕೆಲವು ಬದಲಾವಣೆಗಳೊಂದಿಗೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 2011ರ ಜನಗಣತಿಯ ಆಧಾರದ ಮೇಲೆ ಈ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.
ಕ್ಷೇತ್ರವಾರು ಪ್ರಮುಖ ವಾರ್ಡ್‌ಗಳು
ದಾಸರಹಳ್ಳಿ ಕ್ಷೇತ್ರ: ನಾಗಸಂದ್ರ (ಸಾಮಾನ್ಯ), ಶಿವಪುರ (SC), ಶ್ರೀಗಂಧನಗರ (ಹಿಂ.ವರ್ಗ ‘ಅ’).
ಯಶವಂತಪುರ ಕ್ಷೇತ್ರ: ಅಂದ್ರಹಳ್ಳಿ (ST), ಹೆರೋಹಳ್ಳಿ (ಹಿಂ.ವರ್ಗ ‘ಅ’ ಮಹಿಳೆ).
ರಾಜಾಜಿನಗರ ಕ್ಷೇತ್ರ: ದಯಾನಂದ ನಗರ (SC ಮಹಿಳೆ), ರಾಜಾಜಿನಗರ (ಸಾಮಾನ್ಯ).
ವಿಜಯನಗರ ಕ್ಷೇತ್ರ: ಸಂಗೊಳ್ಳಿ ರಾಯಣ್ಣ ವಾರ್ಡ್ (ST ಮಹಿಳೆ), ಕೃಷ್ಣದೇವರಾಯ ವಾರ್ಡ್ (SC ಮಹಿಳೆ).
ಬಸವನಗುಡಿ ಮತ್ತು ಪದ್ಮನಾಭನಗರ: ಈ ಭಾಗದ ಬಹುತೇಕ ವಾರ್ಡ್‌ಗಳು ಸಾಮಾನ್ಯ ಮತ್ತು ಸಾಮಾನ್ಯ ಮಹಿಳಾ ಮೀಸಲಾತಿಯಡಿ ಬಂದಿವೆ.
ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ನಂದಕುಮಾರ್ ಬಿ. ಅವರು ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಅಧಿಸೂಚನೆ
1. ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 291 ಬಿಬಿಎಸ್ 2025, ದಿನಾಂಕ:19-11-2025 ಮತ್ತು ಸರ್ಕಾರದ ತಿದ್ದುಪಡಿ ಅಧಿಸೂಚನೆ ಸಂಖ್ಯೆ: ನಅಇ 291 ಬಿಬಿಎಸ್ 2025, ದಿನಾಂಕ:01-12-2025ರಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಪ್ರಕರಣ 29ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಹೊಸದಾಗಿ ಸ್ಥಾಪನೆಯಾದ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ 112 ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆಯನ್ನು ಪ್ರಕಟಿಸಲಾಗಿರುತ್ತದೆ.
2. ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024 ರ ಪ್ರಕರಣ 29ರ ಉಪ ಪ್ರಕರಣ (3) ಮತ್ತು (4)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಸರ್ಕಾರದ ಆದೇಶ ಸಂಖ್ಯೆ:ನಅಇ 240 ಬಿಬಿಎಸ್ 2025, ದಿನಾಂಕ:19-12-2025 ರಲ್ಲಿನ ಮಾರ್ಗಸೂಚಿಗಳನ್ನಯ, 2011ರ ಜನಗಣತಿಯ ಆಧಾರದ ಮೇರೆಗೆ, ಗ್ರೇಟರ್ ಬೆಂಗಳೂರು ಪ್ರದೇಶದ ಬೆಂಗಳೂರು ಪಶ್ಚಿಮ ನಗರ ಪಾಲಿಕೆಗೆ ಸಂಬಂಧಿಸಿದಂತೆ 112 ವಾರ್ಡುಗಳ ಕರಡು ವಾರ್ಡ್‌ಾರು ಮೀಸಲಾತಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 18 ಬಿಬಿಎಸ್ 2026, ದಿನಾಂಕ:08-01-2026ರಲ್ಲಿ ಕಡತವನ್ನು ಅದನ್ನು ಕರ್ನಾಟಕ ರಾಜ್ಯಪತ್ರ ವಿಶೇಷ ರಾಜ್ಯಪತ್ರಿಕೆಯ ಭಾಗ-3, ಸಂಚಿಕೆ-42 ದಿನಾಂಕ:08-01-2026ರಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿ ಈ ಬಗ್ಗೆ ಯಾವುದೇ ಸಲಹೆ/ಆಕ್ಷೇಪಣೆಗಳನ್ನು ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಗೊಂಡ ದಿನಾಂಕದಿಂದ 15 (ಹದಿನೈದು) ದಿನಗಳೊಳಗಾಗಿ ಅಂದರೆ ದಿನಾಂಕ: 23-01-2026ರ ಅಪರಾಹ್ನ 5.30 ಗಂಟೆಯೊಳಗಾಗಿ ಸಲ್ಲಿಸಲು ಕಾಲಾವಕಾಶ ನಿಗದಿಪಡಿಸಲಾಗಿತ್ತು ಹಾಗೂ ಸದರಿ ರಾಜ್ಯಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು.
3. ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡುಗಳ ಕರಡು ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಸ್ವೀಕೃತವಾದ ಎಲ್ಲಾ ಸಲಹೆ/ ಆಕ್ಷೇಪಣೆಗಳನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 240 ಬಿಬಿಎಸ್ 2025, ದಿನಾಂಕ:24-09-2025ರನ್ವಯ ರಚಿಸಲಾದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ರವರ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯ ಮುಂದೆ ದಿನಾಂಕ:17-02-2026ರ ಸಭೆಯಲ್ಲಿ ಮಂಡಿಸಲಾಗಿತ್ತು. ಸಮಿತಿಯು ಎಲ್ಲಾ ಸಲಹೆ/ಆಕ್ಷೇಪಣೆಗಳನ್ನು ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024 ಮತ್ತು ಸರ್ಕಾರದ ಆದೇಶ ಸಂಖ್ಯೆ: ನಅಇ 240 ಬಿಬಿಎಸ್ 2025, ದಿನಾಂಕ:19-12-2025ರ ಮಾರ್ಗಸೂಚಿಗಳಂತೆ ಪರಿಶೀಲಿಸಿ, ಕೆಲವು ಸಲಹೆ/ಆಕ್ಷೇಪಣೆಗಳು ಕೂಲಂಕಷವಾಗಿ
ಮತ್ತು
ಸಮರ್ಥನೀಯವಾಗಿರುವುದನ್ನು ಪರಿಗಣಿಸಿ, ಅವುಗಳಿಗೆ ಅನುಗುಣವಾಗಿ ಕೆಲವೊಂದು ಬದಲಾವಣೆಗಳನ್ನು ಮಾಡಿ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ 112 ವಾರ್ಡುಗಳ ಅಂತಿಮ ಮೀಸಲಾತಿಯನ್ನು ಸಿದ್ಧಪಡಿಸಿರುತ್ತದೆ. ಹೀಗೆ ಸಿದ್ದಪಡಿಸಲಾದ ಮೀಸಲಾತಿ ಪಟ್ಟಿಯು ಮಾರ್ಗಸೂಚಿಯ ಅನುಸಾರ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳಾ ಮೀಸಲಾತಿ ಹಾಗೂ ಸಾಮಾನ್ಯ (ಮೀಸಲೇತರ) ಸ್ಥಾನಗಳ ಪ್ರಮಾಣವನ್ನು ಕಾಯ್ದುಕೊಂಡಿರುವುದನ್ನು ಖಚಿತಪಡಿಸಿಕೊಂಡು ಸಮಿತಿಯು ಅಂತಿಮ ಮೀಸಲಾತಿ ಪಟ್ಟಿಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತದೆ.
4. ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರವು ಒಪ್ಪಿರುತ್ತದೆ. ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024 ರ ಪ್ರಕರಣ 29ರ ಉಪ ಪ್ರಕರಣ (3) ಮತ್ತು (4)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಸರ್ಕಾರದ ಆದೇಶ ಸಂಖ್ಯೆ:ನಅಇ 240 ಬಿಬಿಎಸ್ 2025, ದಿನಾಂಕ:19-12-2025 ರಲ್ಲಿನ ಮಾರ್ಗಸೂಚಿಗಳನ್ನಯ, 2011ರ ಜನಗಣತಿಯ ಆಧಾರದ ಮೇರೆಗೆ ಗ್ರೇಟರ್ ಬೆಂಗಳೂರು ಪ್ರದೇಶದ ಬೆಂಗಳೂರು ಪಶ್ಚಿಮ ನಗರ ಪಾಲಿಕೆಗೆ ಸಂಬಂಧಿಸಿದಂತೆ 112 ವಾರ್ಡುಗಳ ಅಂತಿಮ ವಾರ್ಡ್‌ವಾರು ಮೀಸಲಾತಿಯನ್ನು ಅಂತಿಮಗೊಳಿಸಿ ಈ ಮೂಲಕ ಅಧಿಸೂಚಿಸಲಾಗಿದೆ.
5. ಬೆಂಗಳೂರು ಪಶ್ಚಿಮ ನಗರ ಪಾಲಿಕೆಗೆ ಸಂಬಂಧಿಸಿದಂತೆ, ಅಂತಿಮ ವಾರ್ಡ್‌ಗಳ ಮೀಸಲಾತಿ ಸಂಖ್ಯಾ ವಿವರಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಅನುಕ್ರಮವಾಗಿ ಅನುಬಂಧ-1 ಮತ್ತು ಅನುಬಂಧ-2ರಲ್ಲಿ ಪ್ರಕಟಿಸಲಾಗಿದೆ. ಕೋಷ್ಟಕದ 1ನೇ ಅಂಕಣದಲ್ಲಿ ಒಟ್ಟು ವಾರ್ಡ್‌ಗಳ ಸಂಖ್ಯೆಯನ್ನು ಹಾಗೂ ಕೋಷ್ಟಕದ 2,3,4,5 ಮತ್ತು 6ನೇ ಅಂಕಣದಲ್ಲಿ ನಮೂದಿಸಿರುವ ಸಂಖ್ಯೆಯನ್ನು ಕ್ರಮವಾಗಿ ಅನುಸೂಚಿತ ಜಾತಿ ಅನುಸೂಚಿತ ಪಂಗಡ, ಹಿಂದುಳಿದ “ಅ” ವರ್ಗ ಮತ್ತು ಹಿಂದುಳಿದ “ಬ” ವರ್ಗ ಹಾಗೂ ಸಾಮಾನ್ಯ ವರ್ಗದ ಸ್ನಾನಗಳೆಂದು ಮತ್ತು ಆವರಣಗಳಲ್ಲಿ ನಮೂದಿಸಿರುವ ಸ್ಥಾನಗಳು ಪ್ರತಿಯೊಂದು ಪ್ರವರ್ಗದಲ್ಲಿ ಮೀಸಲಿಟ್ಟಿರುವ ಸ್ಥಾನಗಳ ಪೈಕಿ ಮಹಿಳೆಯರಿಗಾಗಿ ಮೀಸಲಿರಿಸಲ್ಪಟ್ಟ ಸ್ಥಾನಗಳೆಂದು ನಮೂದಿಸಲಾಗಿರುತ್ತದೆ.
6. ಬೆಂಗಳೂರು ಪಶ್ಚಿಮ ನಗರ ಪಾಲಿಕೆಗೆ ಸಂಬಂಧಿಸಿದಂತೆ, ಅಂತಿಮ ವಾರ್ಡ್‌ಾರು ಮೀಸಲಾತಿಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಅನುಕ್ರಮವಾಗಿ ಅನುಬಂಧ-3 ಮತ್ತು ಅನುಬಂಧ-4ರಲ್ಲಿ ಪ್ರಕಟಿಸಲಾಗಿದೆ. ಕೋಷ್ಟಕದ ಅಂಕಣ-2 ರಲ್ಲಿ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರನ್ನು, ಅಂಕಣ-3ರಲ್ಲಿ ವಾರ್ಡಿನ ಸಂಖ್ಯೆ ಮತ್ತು ಹೆಸರನ್ನು ಹಾಗೂ ಅಂಕಣ-4 ರಲ್ಲಿ ಅಂತಿಮ ವಾರ್ಡ್ ವಾರು ಮೀಸಲಾತಿಯನ್ನು ನಮೂದಿಸಲಾಗಿದೆ.









