ಬೆಂಗಳೂರು : ರಾಜ್ಯದಲ್ಲಿ ವಕ್ಫ್ ಬೋರ್ಡ್ ಆಸ್ತಿ ನೋಂದಣಿ ವಿಚಾರವಾಗಿ ರಾಜ್ಯದ 4 ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಕರ್ನಾಟಕದಲ್ಲಿ 21167 ವಕ್ಫ್ ಆಸ್ತಿಗಳ ಖಾತೆ ಬದಲಾವಣೆ ಪ್ರಕರಣಗಳು ಬಾಕಿ ಇವೆ. ಹೀಗಾಗಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ರಾಜ್ಯದ ನಾಲ್ಕು ಪ್ರಾದೇಶಿಕ ಆಯುಕ್ತರಿಗೆ ತುರ್ತಾಗಿ ಅನುಪಾಲನಾ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಬಾಕಿ ಇರುವ ಪ್ರಕರಣಗಳ ಬಗ್ಗೆ ಸರ್ಕಾರಕ್ಕೆ ಇಂದೇ ವರದಿ ಸಲ್ಲಿಸಬೇಕೆಂದು ತಿಳಿಸಲಾಗಿದೆ.
ವಕ್ಫ್ ಆಸ್ತಿಗಳ ಖಾತೆ ಬದಲಾವಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅನುಪಾಲನಾ ವರದಿ ಇಂದೇ ಸರ್ಕಾರಕ್ಕೆ ಸಲ್ಲಿಸುವಂತೆ ರಾಜ್ಯದ ನಾಲ್ಕು ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಮಲಮ್ಮ ಸಿ. ಪತ್ರ ಬರೆದಿದ್ದಾರೆ.
ರಾಜ್ಯಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆಯ ಪ್ರಕಾರ್ಯಗಳಲ್ಲಿ ಸಾಧಿಸಿದ ಪ್ರಗತಿಯ ನಾಲ್ಕನೇ ಪರಿಶೀಲನಾ ಸಭೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಖಾತೆ ಬದಲಾವಣೆಗೆ ಬಾಕಿಯಿರುವ ಒಟ್ಟು 21167 ಪ್ರಕರಣಗಳಲ್ಲಿ ಅಗತ್ಯ ಕ್ರಮ ವಹಿಸಿ, ಅನುಪಾಲನಾ ವರದಿಯನ್ನು ತುರ್ತಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು.
ಈ ಕುರಿತು ಇದುವರೆಗೆ ಯಾವುದೇ ಮಾಹಿತಿ ಸ್ವೀಕೃತವಾಗಿಲ್ಲ. ಆದ್ದರಿಂದ, ವಕ್ಫ್ ಆಸ್ತಿಗಳ ಖಾತೆ ಬದಲಾವಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ ಕೈಗೊಂಡ ಕ್ರಮದ ಅನುಪಾಲನಾ ವರದಿಯನ್ನು ಇಂದೇ ಸರ್ಕಾರಕ್ಕೆ ಸಲ್ಲಿಸುವಂತೆ ಮತ್ತೊಮ್ಮೆ ಸೂಚನೆ ನೀಡಲಾಗಿದೆ.
ವಕ್ಫ್ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಜಂಟಿ ಸಂಸದೀಯ ಸಮಿತಿ ರಾಜ್ಯಕ್ಕೆ ಭೇಟಿ ಕೊಟ್ಟಿತ್ತು. ಬಳಿಕ ವಕ್ಫ್ ನೋಟಿಸ್ಗೆ ಹೆದರಿ ಹಾವೇರಿ ಜಿಲ್ಲೆಯ ಹರನಗೇರಿ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋ ಸುದ್ದಿಯನ್ನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.