ಬೆಂಗಳೂರು : ವಿವಾದದಿಂದ ಕೂಡಿದ್ದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ. ಇದೇ ಆಗಸ್ಟ್ 7 ರಂದು ರಾತ್ರೋರಾತ್ರಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನ ಧ್ವಂಸ ಮಾಡಲಾಗಿತ್ತು. ಈ ಕಾರಣಕ್ಕೆ ಭಾರೀ ವಿವಾದಕ್ಕೀಡಾಗಿದ್ದ ಜಾಗವನ್ನ ಇದೀಗ ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಡಿಸಿ ಜಗದೀಶ್ ಅವರಿಗೆ ಪತ್ರ ಬರೆದಿದೆ.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮಕ್ಕೆ ಸೇರಿದ ಸರ್ವೇ ನಂ, 26ರಲ್ಲಿ ಅಭಿಮಾನ್ ಸ್ಟುಡಿಯೋಗೆ ಸರ್ಕಾರ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದು ಪಡಿಸಿ ಹಿಂಪಡೆಯುವ ಬಗ್ಗೆ ಅರಣ್ಯ ಇಲಾಖೆ ಪತ್ರದಲ್ಲಿ ಉಲ್ಲೇಖಿಸಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರಕುಮಾರ್ ಅವರು ಪತ್ರ ಬರೆದಿದ್ದಾರೆ.
ಸರ್ಕಾರಿ ಆದೇಶದ ಅನ್ವಯ ಏಪ್ರಿಲ್ 09, 1969 ರಂದು 20 ಎಕರೆ ಪ್ರದೇಶವನ್ನು ಟಿ ಎನ್ ಬಾಲಕೃಷ್ಣ ಅವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು. ಸರ್ಕಾರಿ ಆದೇಶದಲ್ಲಿ ಅಭಿಮಾನ್ ಸ್ಟಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು ಮಾರಾಟ/ ಪರಭಾರೆ ಕೊಡದಿರಲು ಷರತ್ತು ವಿಧಿಸಲಾಗಿತ್ತು.
ಬಾಲಕೃಷ್ಣ ನಿಧನದ ಬಳಿಕ ಅವರ ಮಕ್ಕಳಾದ ಗಣೇಶ್ ಹಾಗೂ ಮೊಮ್ಮಗ ಕಾರ್ತಿಕ್ ಅನಧಿಕೃತವಾಗಿ 10 ಎಕರೆ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ನಮೂದಿಸಲಾಗಿದೆ. ಅಭಿಮಾನ್ ಸ್ಟುಡಿಯೋ ನವೀಕರಣ ಮಾಡುವ ಸಲುವಾಗಿ ಬೇಕಾಗುವ ಹಣಕ್ಕಾಗಿ ಆಸ್ತಿ ಮಾರಾಟಕ್ಕೆ ಅನುಮತಿ ಕೇಳಿ ಮಾರಿದ್ದರು. ಇಲ್ಲಿಯೂ ಉದ್ದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂಬುದಾಗಿ ಪತ್ರದಲ್ಲಿ ಉಲೇಖವಾಗಿದೆ.