ಬಾಗಲಕೋಟೆ : ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಯ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು 17 ಜನರನ್ನು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಘಟನೆಗೆ ಕಾರಣರಾದವರು ರೈತರಲ್ಲ, ಕಿಡಿಗೇಡಿಗಳು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ವಿಡಿಯೋ ಸಾಕ್ಷ್ಯ ಆಧರಿಸಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಪೊಲೀಸರು ಘಟನೆಯ ವಿಡಿಯೋವನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡು ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಆರೋಪಿ ಯಾವ ಕೃತ್ಯ ನಡೆಸಿದ್ದಾನೆಂದು ವಿಡಿಯೋ ಸಾಕ್ಷಿ ಕಲೆಹಾಕಿದ ಬಳಿಕವೇ ಅರೆಸ್ಟ್ ಮಾಡಲಾಗಿದೆ. ರೈತರ ಕಡೆ ನಿಂತು 13 ಜನ ಕಲ್ಲು ತೂರಿದ್ದರೆ, ಇನ್ನೊಂದೆಡೆ ಕಾರ್ಖಾನೆ ಕಡೆಯಿಂದ ಕಲ್ಲು ತೂರಾಟ ನಡೆಸಿರುವ 4 ಜನರು ಸೇರಿ ಒಟ್ಟು 17 ಮಂದಿಯನ್ನು ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ನೀಡಿರುವ ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೋಯೆಲ್, ಇದು ರೈತರ ಕೃತ್ಯ ಅಲ್ಲ. ಬಂಧಿತ ಕಿಡಿಗೇಡಿಗಳು ಘಟನೆ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಬೆಂಕಿ ಹಚ್ಚಿದ್ದು ಮತ್ತು ಕಲ್ಲು ತೂರಿದ್ದು ತಾವೇ ಎಂದು ಹೇಳಿದ್ದಾರೆ. ಘಟನೆಯಲ್ಲಿ ಒಬ್ಬ ಎಎಸ್ಐ ಕಾಲು ಮುರಿದಿದ್ದರೆ, ಕೆಲ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಜನರಿಗೆ ನೊಟೀಸ್ ಕೊಟ್ಟು ಬಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.








