ವಿಜಯಪುರ : ಗಂಡ ಹೆಂಡತಿಯ ಜಗಳ ಬಿಡಿಸಲು ಬಂದ ಅತ್ತೆಯನ್ನೇ ಅಳಿಯನೊಬ್ಬ ಭೀಕರವಾಗಿ ಕೊಲೆ ಮಾಡಿ ಬಳಿಕ ಶವವನ್ನು ಕೆನಾಲ್ಗೆ ಎಸೆದಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಿನ್ನೆ ನಡೆದಿದೆ.
ಮೃತರನ್ನು ಶಿರಶ್ಯಾಡ ಗ್ರಾಮದ ಗೌರಾಬಾಯಿ ಈರಣ್ಣ ನರಳಿ(65) ಕೊಲೆಯಾಗಿರುವ ಮಹಿಳೆ ಎಂದು ತಿಳಿದುಬಂದಿದೆ.ಇನ್ನು ಅತ್ತೆಯನ್ನು ಕೊಲೆ ಮಾಡಿರುವ ಅಳಿಯನನ್ನು ಭೀಮಪ್ಪ ಗುಗ್ಗರಿ ಎಂದು ತಿಳಿದುಬಂದಿದೆ. ಗೌರಾಬಾಯಿ ಪುತ್ರಿ ದೇವಕಿಯನ್ನು ಭೀಮಪ್ಪ ಮದುವೆಯಾಗಿದ್ದ. ನಿರಂತರ ಮದ್ಯ ಸೇವನೆ ಸಂಬಂಧ ಪತಿ-ಪತ್ನಿ ನಡುವೆ ಜಗಳ ನಡೆದಿತ್ತು. ಇವರಿಬ್ಬರಿಗೆ ಬುದ್ಧಿ ಹೇಳಿ, ಸಂಧಾನ ಮಾಡಲು ಗೌರಾಬಾಯಿ ಮಂಗಳವಾರ ಬಂದಿದ್ದರು.
ಆಗ ಕುಡಿದ ಮತ್ತಿನಲ್ಲಿ ಸಿಟ್ಟಿಗೆದ್ದು ದೊಣ್ಣೆಯಿಂದ ಆಕೆಯನ್ನು ಅಳಿಯ ಭೀಮಪ್ಪ ಹತ್ಯೆ ಮಾಡಿದ್ದಾನೆ. ಬಳಿಕ, ಶವವನ್ನು ಚೀಲದಲ್ಲಿ ಕಟ್ಟಿ ಗ್ರಾಮದ ಬಳಿಯಿರುವ ಕೆನಾಲ್ ಗೆ ಬಿಸಾಕಿದ್ದಾನೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾನೆ. ನಂತರ ದೇವಕಿ ದೇವರಹಿಪ್ಪರಗಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ನಿನ್ನೆ ಮಧ್ಯಾಹ್ನ ಶವ ಹೊರ ತೆಗೆದಿದ್ದಾರೆ.