ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ವೇಳೆ ಮಾಜಿ ಸಚಿವ ನಾಗೇಂದ್ರ ಅವರ ಹೆಸರು ಹೇಳುವಂತೆ ಒತ್ತಡ ಹೇರಿರುವ ಆರೋಪದ ಮೇಲೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯದ (ED) ಇಬ್ಬರು ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹೌದು ನಿನ್ನೆ ಮಾಜಿ ಸಚಿವ ಬಿ.ನಾಗೇಂದ್ರ ಒತ್ತಡದಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ತಮ್ಮ ಮೇಲೆ ಇಡಿ ಅಧಿಕಾರಿಗಳು ಒತ್ತಡ ಹಾಕಿದ್ದಾರೆ ಹಾಗೂ, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಕಲ್ಲೇಶ್.ಬಿ ದೂರು ನೀಡಿದ್ದರು.
ಈ ವೇಳೆ ಇಡಿ ಅಧಿಕಾರಿಗಳ ಪರ ಹಾಜರಾದ ಹಿರಿಯ ವಕೀಲ ಮಧುಕರ್ ದೇಶಪಾಂಡೆ, ಅರ್ಜಿದಾರರು ಇಡಿ ಅಧಿಕಾರಿಗಳಾಗಿದ್ದಾರೆ, ಅವರು ತಮ್ಮ ಅಧಿಕೃತ ಕರ್ತವ್ಯವನ್ನಷ್ಟೇ ನಿರ್ವಹಿಸಿದ್ದಾರೆ. ಹೀಗಿದ್ದರೂ ಇಡಿ ವಿಚಾರಣೆಗೆ ಹಾಜರಾಗಿದ್ದ ದೂರುದಾರರು, ವಿಚಾರಣೆ ಮುಗಿದ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಇ.ಡಿ. ಅಧಿಕಾರಿಗಳ ವಿರುದ್ಧ ದೂರು
ದಾಖಲಿಸಿದ್ದಾರೆ.
ಇಡಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಲು ಹಾಗೂ ಯಾವುದೇ ಪ್ರಾಥಮಿಕ ವಿಚಾರಣೆ ನಡೆಸದೇ ಇ.ಡಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಾಗಾಗಿ, ಅರ್ಜಿಯನ್ನು ಕೂಡಲೇ ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು.ಅದಕ್ಕೆ ಒಪ್ಪಿದ ನ್ಯಾಯಪೀಠ, ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ನಡೆಸಲಾಗುವುದು. ಅರ್ಜಿಯ ಪ್ರತಿಯನ್ನು ರಾಜ್ಯ ಸರ್ಕಾರದ ಪರ ವಕೀಲರಿಗೆ ಒದಗಿಸುವಂತೆ ಸೂಚಿಸಿತು.