ವಾಷಿಂಗ್ಟನ್: ಜಗತ್ತು ಮತ್ತೊಂದು ಯುದ್ಧದ ಭೀತಿಯಲ್ಲಿದ್ದಾಗ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಿಂದ ಹಿಂದೆ ಸರಿಯುವ ಮೂಲಕ ಅಚ್ಚರಿಯ ನಿರ್ಧಾರ ಕೈಗೊಂಡಿದ್ದಾರೆ. ನಿಗದಿತ ಗಡುವು ಮುಕ್ತಾಯಕ್ಕೆ ಕೇವಲ ಒಂದು ಗಂಟೆ ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದ್ದು, ಮುಂದಿನ 15 ದಿನಗಳ ಕಾಲ ಯಾವುದೇ ದಾಳಿ-ಪ್ರತಿದಾಳಿ ನಡೆಸದಿರಲು ಉಭಯ ದೇಶಗಳು ತೀರ್ಮಾನಿಸಿವೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಇರಾನ್ ಮೇಲಿನ ಕ್ಷಿಪಣಿ ದಾಳಿಯನ್ನು ತಡೆಹಿಡಿಯುವಂತೆ ಟ್ರಂಪ್ ಅವರಿಗೆ ನೇರ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಟ್ರಂಪ್, ಎರಡು ವಾರಗಳ ‘ದ್ವಿಪಕ್ಷೀಯ ಕದನ ವಿರಾಮ’ಕ್ಕೆ ಹಸಿರು ನಿಶಾನೆ ತೋರಿದ್ದಾರೆ.
ತಮ್ಮ ಅಧಿಕೃತ ‘ಟ್ರೂತ್ ಸೋಶಿಯಲ್’ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಧ್ಯಕ್ಷ ಟ್ರಂಪ್, ಈ ಕದನ ವಿರಾಮದ ಹಿಂದಿನ ಷರತ್ತುಗಳನ್ನು ಸ್ಪಷ್ಟಪಡಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಮುಕ್ತಕ್ಕೆ ಷರತ್ತು: ಇರಾನ್ ತನ್ನ ಅಧೀನದಲ್ಲಿರುವ ಆಯಕಟ್ಟಿನ ಪ್ರದೇಶವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಸಂಪೂರ್ಣವಾಗಿ ಮತ್ತು ಸುರಕ್ಷಿತವಾಗಿ ವ್ಯಾಪಾರಕ್ಕೆ ಮುಕ್ತಗೊಳಿಸಬೇಕು ಎಂಬ ಷರತ್ತಿನ ಮೇಲೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
10 ಅಂಶಗಳ ಶಾಂತಿ ಪ್ರಸ್ತಾವನೆ: ಇರಾನ್ ಕಡೆಯಿಂದ ಬಂದಿರುವ 10 ಅಂಶಗಳ ಶಾಂತಿ ಪ್ರಸ್ತಾವನೆಯು ಮಾತುಕತೆಗೆ ಭದ್ರ ಬುನಾದಿ ಒದಗಿಸಿದೆ. ಬಹುತೇಕ ವಿವಾದಾತ್ಮಕ ವಿಷಯಗಳ ಬಗ್ಗೆ ಈಗಾಗಲೆ ಒಮ್ಮತ ಮೂಡಿದೆ.
ಅಂತಿಮ ಒಪ್ಪಂದದ ನಿರೀಕ್ಷೆ: ಮುಂದಿನ ಎರಡು ವಾರಗಳಲ್ಲಿ ಅಂತಿಮ ಶಾಂತಿ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕುವ ಸಾಧ್ಯತೆಯಿದೆ.
ಸೈನಿಕ ಗುರಿ ಸಾಧನೆ: ಅಮೆರಿಕ ಈಗಾಗಲೇ ತನ್ನ ಮಿಲಿಟರಿ ಉದ್ದೇಶಗಳನ್ನು ಮೀರಿ ಸಾಧಿಸಿದೆ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.








