ಹೈದರಾಬಾದ್: ಕೇಂದ್ರ ಸಚಿವ ಹಾಗೂ ತೆಲಂಗಾಣ ಬಿಜೆಪಿ ಪ್ರಮುಖ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ್ನನ್ನು ಪೋಕ್ಸೊ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಆದರೆ, ತನಿಖೆಗೆ ಸಹಕರಿಸಲು ತನ್ನ ಮಗ ಸ್ವತಃ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂಬ ಕೇಂದ್ರ ಸಚಿವರ ಹೇಳಿಕೆಯನ್ನು ಸೈಬರಾಬಾದ್ ಪೊಲೀಸ್ ಕಮಿಷನರ್ ರಮೇಶ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಆರೋಪಿಯನ್ನು ಹೈದರಾಬಾದ್ ಹೊರವಲಯದಲ್ಲಿ ಬಂಧಿಸಲಾಗಿದೆಯೇ ಹೊರತು, ಇದು ಶರಣಾಗತಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂತ್ರಸ್ತ ಯುವತಿ ಮತ್ತು ಆಕೆಯ ಪೋಷಕರ ಹೇಳಿಕೆಯನ್ನು ನ್ಯಾಯಾಲಯದ ಮುಂದೆ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ದೇಶ ಬಿಟ್ಟು ಓಡಿಹೋಗದಂತೆ ತಡೆಯಲು ಲುಕ್-ಔಟ್ (Look-out) ಸುತ್ತೋಲೆಯನ್ನು ಹೊರಡಿಸಿದ್ದರು. ಇದರ ಬೆನ್ನಲ್ಲೇ ಶನಿವಾರ ಈ ಬಂಧನ ಪ್ರಕ್ರಿಯೆ ನಡೆದಿದೆ.
ತಮ್ಮ ಮಗನ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್, “ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಎಂದು ಸತತವಾಗಿ ಹೇಳುತ್ತಿದ್ದಾನೆ. ಕಾನೂನಿನ ಮೇಲಿನ ಗೌರವ ಮತ್ತು ತನಿಖೆಗೆ ಸಹಕರಿಸುವ ನಿಟ್ಟಿನಲ್ಲಿ ನಾವೇ ವಕೀಲರ ಮೂಲಕ ಆತನನ್ನು ಪೊಲೀಸರ ಮುಂದೆ ಹಾಜರುಪಡಿಸಿದ್ದೇವೆ. ಸಾಮಾನ್ಯ ನಾಗರಿಕನಾಗಿರಲಿ ಅಥವಾ ನನ್ನ ಮಗನೇ ಆಗಿರಲಿ, ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂದು ಹೇಳಿದ್ದಾರೆ.
ಆರಂಭದಲ್ಲೇ ಮಗನನ್ನು ಪೊಲೀಸರ ವಶಕ್ಕೆ ಒಪ್ಪಿಸಲು ನಿರ್ಧರಿಸಲಾಗಿತ್ತು, ಆದರೆ ಕಾನೂನು ತಜ್ಞರ ಸಲಹೆ ಪಡೆಯುವಾಗ ವಿಳಂಬವಾಯಿತು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. “ನಾವು ಎಲ್ಲಾ ಪುರಾವೆಗಳನ್ನು ವಕೀಲರ ತಂಡಕ್ಕೆ ನೀಡಿದ್ದೆವು. ಪ್ರಕರಣದಲ್ಲಿ ಜಾಮೀನು ಸಿಗುವ ಸಾಧ್ಯತೆ ನಿಶ್ಚಿತವಾಗಿದೆ ಎಂದು ವಕೀಲರು ತಿಳಿಸಿದ್ದರು. ಹೀಗಾಗಿಯೇ ಪ್ರಕ್ರಿಯೆ ಸ್ವಲ್ಪ ತಡವಾಯಿತು. ಆದರೆ ವಿಷಯವನ್ನು ಮತ್ತಷ್ಟು ಮುಂದೂಡಬಾರದು ಎಂಬ ಕಾರಣಕ್ಕೆ ನಾವೇ ಆತನನ್ನು ಕರೆತಂದಿದ್ದೇವೆ” ಎಂದು ಹೇಳಿರುವ ಸಚಿವರು, ರಾಜಕೀಯ ದ್ವೇಷಕ್ಕಾಗಿ ತಮ್ಮ ಕುಟುಂಬವನ್ನು ಗುರಿಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಬಂಡಿ ಭಗೀರಥ್ ವಿರುದ್ಧ ಹೈದರಾಬಾದ್ನ ಪೆಟ್ಬಶೀರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 74 ಮತ್ತು 75 ರ ಜೊತೆಗೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 11 ಮತ್ತು 12 ರ ಅಡಿಯಲ್ಲಿ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ದಾಖಲಿಸಲಾಗಿದೆ.
ದೂರಿನಲ್ಲಿ ಏನಿದೆ?
ಸಂತ್ರಸ್ತೆಯ ತಾಯಿ ನೀಡಿರುವ ದೂರಿನ ಪ್ರಕಾರ, ಆರೋಪಿ ಭಗೀರಥ್ ಜೂನ್ 2025 ರಲ್ಲಿ ಮದುವೆಯ ಸುಳ್ಳು ಭರವಸೆ ನೀಡಿ ಅಪ್ರಾಪ್ತ ಹುಡುಗಿಯೊಂದಿಗೆ ಸಂಬಂಧ ಬೆಳೆಸಿದ್ದನು. ತದನಂತರ ಅಕ್ಟೋಬರ್ 2025 ಮತ್ತು ಜನವರಿ 2026 ರ ನಡುವಿನ ಅವಧಿಯಲ್ಲಿ ಆಕೆಗೆ ಅನುಚಿತವಾಗಿ ದೈಹಿಕ ಕಿರುಕುಳ ನೀಡಿ, ಬಲವಂತವಾಗಿ ಮದ್ಯ ಸೇವಿಸುವಂತೆ ಒತ್ತಡ ಹೇರಿದ್ದನು ಎನ್ನಲಾಗಿದೆ. ಜನವರಿ 7 ರಂದು ಇವರ ಸಂಬಂಧ ಮುರಿದುಬಿದ್ದಿದ್ದು, ಮಾನಸಿಕ ನೊಂದ ಯುವತಿ ಜನವರಿ ಕೊನೆಯ ವಾರದಲ್ಲಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.








