ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಅಪ್ರಾಪ್ತೆಯ ಕತ್ತು ಸೀಳಿ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಇಲ್ಲಿನ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ರಾಜಸ್ಥಾನದ ಅಜ್ಮೀರ್ನಲ್ಲಿ ಬಂಧಿಸಿದ್ದಾರೆ. ಆರೋಪಿ ಶಬೀಲ್ (20) ಎಂಬಾತನನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ.
ಮಾರ್ಚ್ 17ರಂದು ಡಿ.ಜೆ.ಹಳ್ಳಿ ವ್ಯಾಪ್ತಿಯ ಸಕ್ಕರೆ ಮಂಡಿ ಸಮೀಪದ ಪಾಳು ಬಿದ್ದ ಮನೆಯಲ್ಲಿ ಅಪ್ರಾಪ್ತೆಯ (17 ವರ್ಷಕ್ಕಿಂತ ಮೇಲ್ಪಟ್ಟ) ಮೃತದೇಹ ಪತ್ತೆಯಾಗಿತ್ತು. ಕೊಲೆಯಾದ ಅಪ್ರಾಪ್ತೆ ಮತ್ತು ಶಬೀಲ್‌ಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಬಕ್ರೀದ್ ಹಬ್ಬದ ನಂತರ ಇಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು.
ಇಬ್ಬರೂ ಸಹ ಸಕ್ಕರೆ ಮಂಡಿಯಲ್ಲಿರುವ ಶಬೀಲ್‌ನ ಸಂಬಂಧಿಕರ ಒಡೆತನದ ಪಾಳು ಬಿದ್ದ ಕಟ್ಟಡದ ಬಳಿ ಆಗಾಗ್ಗೆ ಭೇಟಿಯಾಗುತ್ತಿದ್ದರು. ನಿಶ್ಚಿತಾರ್ಥದ ಬಳಿಕ ಸಣ್ಣ, ಸಣ್ಣ ವಿಷಯಗಳಿಗೂ ಅನುಮಾನಿಸುತ್ತಿದ್ದ ಶಬೀಲ್, ಅಪ್ರಾಪ್ತೆಯ ಜೊತೆ ಜಗಳವಾಡಲಾರಂಭಿಸಿದ್ದ. ಅದೇ ಕಾರಣದಿಂದ ಬರ್ಬರ ಕೃತ್ಯ ಎಸಗಿ ಪರಾರಿಯಾಗಿದ್ದ ಎಂಬ ಮಾಹಿತಿ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
ಕೃತ್ಯದ ಬಳಿಕ ಬಂಧನ ಭೀತಿಯಿಂದ ಕುಟುಂಬ ತೊರೆದಿದ್ದ ಆರೋಪಿ, ಯಾರ ಸಂಪರ್ಕಕ್ಕೂ ಸಿಗದೆ ಅಜ್ಮೀರ್‌ಗೆ ತೆರಳಿದ್ದ. ಈ ನಡುವೆ ಅಜ್ಮೀರ್‌ಗೆ ತೆರಳಿದ್ದ ಡಿ.ಜೆ.ಹಳ್ಳಿಯ ಯುವಕನೊಬ್ಬ ಪ್ರಾರ್ಥನೆಗೆ ಬಂದಿದ್ದ ಶಬೀಲ್‌ನನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಕೂಡಲೇ ಅಲ್ಲಿನ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಂತರ ಅಜ್ಮೀರ್ ತಲುಪಿರುವ ಡಿ.ಜೆ.ಹಳ್ಳಿ ಪೊಲೀಸರು, ಆರೋಪಿಯನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ.








