ಬೆಂಗಳೂರು : ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿ, ಆರೋಗ್ಯ, ಮೂಲಸೌಕರ್ಯ, ರಸ್ತೆ, ಫ್ಲೈವರ್, ಸ್ಕೈಡೆಕ್ ಸೇರಿದಂತೆ ದೂರದೃಷ್ಟಿ ಯೋಜನೆಗಳು ಸೇರಿದಂತೆ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಇಂದು ಬೃಹತ್ ಬೆಂಗಳೂರು ಬಜೆಟ್ ಮಂಡನೆಯಾಗಲಿದೆ. ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮಕ್ಷಮದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ। ಹರೀಶ್ ಕುಮಾರ್ ಬರೋಬ್ಬರಿ 20 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡಿಸಲಿದ್ದಾರೆ.
ಹೌದು ಬಿಬಿಎಂಪಿಯ 2025-26ನೇ ಸಾಲಿನ ಆಯವ್ಯಯದಲ್ಲಿ ರಾಜಧಾನಿಯ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ₹20 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡಿಸುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳಗ್ಗೆ 11ಕ್ಕೆ ನಗರದ ಪುರಭವನದಲ್ಲಿ ಆಯವ್ಯಯ ಮಂಡಿಸುವುದಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳಲಾಗಿದೆ. ಬಿಬಿಎಂಪಿಯ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮಕ್ಷಮದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ। ಹರೀಶ್ ಕುಮಾರ್ ಸುಮಾರು 45 ರಿಂದ 50 ನಿಮಿಷ ಆಯವ್ಯಯದ ಭಾಷಣ ಮಂಡಿಸಲಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ನಗರ ವಿವಿಧ ಕಾಮಗಾರಿಗಳನ್ನು ಅನುಷ್ಠಾನಕ್ಕೆ ವಿಶೇಷ ಉದ್ದೇಶಿತ ವಾಹನ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಆ ನಿಟ್ಟಿನಲ್ಲಿ ಟನಲ್ ರಸ್ತೆ, ಸ್ಕೈಡಕ್, ವೈಟ್ ಟಾಪಿಂಗ್, ಫ್ಲೈಓವರ್ ಸೇರಿದಂತೆ ಮೊದಲಾದ ಯೋಜನೆಗಳನ್ನು ಅನುಷ್ಠಾನಕ್ಕೆ ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಪ್ರತ್ಯೇಕ ಕಂಪನಿ ಸ್ಥಾಪಿಸುವ ಬಗ್ಗೆ ಘೋಷಣೆ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ವೀಕ್ಷಣೆಗೆ ಆನ್‌ಲೈನ್ ವ್ಯವಸ್ಥೆ
ಶನಿವಾರ ಪುರಭವನದಲ್ಲಿ ಮಂಡಿಸುವ ಬಿಬಿಎಂಪಿಯ ಆಯವ್ಯಯ ಸಾರ್ವಜನಿಕರ ವೀಕ್ಷಣೆಗೆ ಆನ್‌ಲೈನ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. https://www.youtube.com/live/eydr2vyROL8?si=q5q6Qz-Yem4uwj_M ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.