ಉಡುಪಿ : ಉಡುಪಿಯಲ್ಲಿ ಹೋಟೆಲ್ ಬಾಣಸಿಗನೊಬ್ಬನ ಭೀಕರ ಕೊಲೆಯಾಗಿದ್ದು, ದುಷ್ಕರ್ಮಿಗಳು ಬಿಯರ್ ಬಾಟಲ್ ಒಡೆದು ಅದರ ಗಾಜಿನಿಂದ ಬಾಣಸಿಗನ ಕತ್ತು ಸೀಳಿ, ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉಡುಪಿಯ ಮಣಿಪಾಲ ಅನಂತ ಕಲ್ಯಾಣನಗರ ಸಮೀಪ ನಡೆದಿದೆ.
ಇನ್ನೂ ಕೊಲೆಯಾದ ಬಾಣಸಿಗನನ್ನು ಕೇರಳದ ಕಾಸರಗೋಡಿನ ಶ್ರೀಧರ್ ನಾಯಕ ಎಂದು ತಿಳಿದುಬಂದಿದೆ. ಮಣಿಪಾಲದ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಬೆಳಗ್ಗೆ ಬಾಡಿಗೆ ಮನೆಯಿಂದ ಹೋಟೆಲ್ಗೆ ಹೋಗುತ್ತಿದ್ದರು ಎಂಬ ಮಾಹಿತಿಯಿದೆ. ದುಷ್ಕರ್ಮಿಗಳು ಕುತ್ತಿಗೆಯನ್ನು ಬಿಯರ್ ಬಾಟಲಿಯಿಂದ ಕೊಯ್ದು ಹತ್ಯೆ ಮಾಡಿರುವುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಡಾ. ಕೆ.ಅರುಣ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ಕೊಲೆ ಯಾವ ಕಾರಣಕ್ಕೆ ನಡೆದಿದೆ ಮತ್ತು ಯಾರು ಮಾಡಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.