ಹಾಸನ : ಈಜು ಬರುತ್ತಿದ್ದರು ಸಹ ಇಬ್ಬರು ಯುವಕರು ಕೆರೆಯಲ್ಲಿ ಈಜಲು ತೆರಳಿದ್ದಾಗ ನೀರಿನಿಂದ ಹೊರಬರಲಾಗದೆ ಒದ್ದಾಡಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕರನ್ನು ಯಶ್ವಂತ್ ಸಿಂಗ್ ಆಲಿಯಾಸ್ ಗಣೇಶ್(29), ರೋಹಿತ್ (28) ಎಂದು ತಿಳಿಬಂದಿದೆ.ಮೊದಲು ಕೆರೆಗೆ ಇಳಿದ ರೋಹಿತ್ ಈಜುವ ವೇಳೆ ಕೆರೆಯ ಗಿಡಗಂಟಿಗಳ ನಡುವೆ ಸಿಲುಕಿದ್ದಾರೆ. ಮೇಲೆ ಬರಲಾಗದೆ ಕಾಪಾಡಿ ಕಾಪಾಡಿ ಎಂದು ಕೂಗಾಡಿದ್ದಾರೆ. ತಕ್ಷಣ ಕೆರೆಗೆ ಜಿಗಿದ ಗಣೇಶ್ ಕೂಡ ಅಲ್ಲಿನ ಕೆಸರು ಹಾಗೂ ಬಳ್ಳಿಗಳ ನಡುವೆ ಸಿಲುಕಿದ್ದಾರೆ. ಮೇಲೆ ಬರಲು ಏನೆಲ್ಲ ಪ್ರಯತ್ನ ಪಟ್ಟರೂ ಸಾದ್ಯವಾಗದೆ ಇಬ್ಬರು ಗೆಳೆಯರು ಒಟ್ಟಿಗೆ ಜಲ ಸಮಾಧಿಯಾಗಿದ್ದಾರೆ.
ಸಂಜೆಯಾದರೂ ಮನೆಗೆ ಬಾರದಿದ್ದರಿಂದ ಮನೆಯವರು ಹುಡುಕುತ್ತಾ ಕೆರೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಸಮೀಪದ ಶ್ರವಣಬೆಳಗೊಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಮೃತದೇಹ ಹೊರತೆಗೆದು ಮರಣೊತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.