ಬೆಂಗಳೂರು : ಬೆಂಗಳೂರಿನಲ್ಲಿ ಋಣಾನುಭಟ ಜೋರಾಗಿದ್ದು ಇಂದು ಬೆಳಿಗ್ಗೆ ತಾನೇ ಬೆಂಗಳೂರಿನ ವೈಟ್ ಫೀಲ್ಡ್ ಭಾಗದಲ್ಲಿ ಭಾರಿ ಮಳೆಯಿಂದಾಗಿ ಗೋಡೆ ಕುಸಿದು ಮಹಿಳೆ ಒಬ್ಬರು ಸಾವನಪ್ಪಿದ್ದರು ಇದೀಗ ಬೆಂಗಳೂರಿನಲ್ಲಿ ಮಹಾಮಳೆಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ.
ಹೌದು ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ನೀರು ನಿಂತಿದ್ದು, ಜನರಿಗೆ ಮನೆಯಿಂದ ಹೊರಗಡೆ ಕಾಲಿಡಲು ಸಹ ಆಗುತ್ತಿಲ್ಲ. ಇದೀಗ ಬೆಂಗಳೂರಿನ ಮಹಾಮಳೆಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಮೃತರನ್ನು ಮನೋಹರ್ ಕಾಮತ್ (55) ಮತ್ತು ದಿನೇಶ್ (9) ಎನ್ನುವ ಬಾಲಕ ಬಲಿಯಾಗಿದ್ದಾರೆ.
ಬಿಟಿಎಂ ಲೇಔಟ್ ನ 2 ನೇ ಹಂತದ ಎನ್ ಎಸ್ ಪಾಳ್ಯದಲ್ಲಿ ಈ ಒಂದು ಘಟನೆ ನಡೆದಿದೆ. ಮಧುವನ ಅಪಾರ್ಟ್ಮೆಂಟ್ನ ಬೇಸ್ಮೆಂಟ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಾರ್ಟ್ಮೆಂಟ್ ನಿವಾಸಿ ಮನೋಹರ್ ಕಾಮತ್ ಹಾಗೂ ನೇಪಾಳ ಮೂಲದ 9 ವರ್ಷದ ಬಾಲಕ ದಿನೇಶ್ ದುರ್ಮರಣ ಹೊಂದಿದ್ದಾರೆ. ಮಳೆಯಿಂದ ಸಂಪೂರ್ಣವಾಗಿ ಅಪಾರ್ಟ್ಮೆಂಟಿನ ಬೇಸ್ಮೆಂಟ್ ಜಲಾವೃತವಾಗಿತ್ತು.
ಈ ವೇಳೆ ಮೋಟಾರ್ ಮೂಲಕ ನೀರು ಹೊರಹಾಕಲು ಯತ್ನಿಸುತ್ತಿದ್ದಾಗ ಎಲೆಕ್ಟ್ರಿಕ್ ಶಾಕ್ ನಿಂದ ಮನೋಹರ್ ಕಾಮತ್ ಮತ್ತು ದಿನೇಶ್ ಸಾವನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಸದ್ಯ ಇಬ್ಬರ ಮೃತ ದೇಹಗಳನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಧುವನ ಅಪಾರ್ಟ್ಮೆಂಟ್ ಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ ಮೈಕೋ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.