ದಾವಣಗೆರೆ : ದಾವಣಗೆರೆಯಲ್ಲಿ ಘೋರ ದುರಂತ ಒಂದು ನಡೆದಿದ್ದು ರಾಗಿ ಬೇರ್ಪಡಿಸುವ ಯಂತ್ರ ಒಂದು ಪಲ್ಟಿಯಾಗಿದ್ದ ಪರಿಣಾಮ ಸ್ಥಳದಲ್ಲೇ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದ ಸಮೀಪ ಸೋಮವಾರ ರಾತ್ರಿ ಸಂಭವಿಸಿದೆ.
ಮೃತ ಕಾರ್ಮಿಕರನ್ನು ಬಂಗರಕ್ಕನಗುಡ್ಡ ಗ್ರಾಮದ ಮಹೇಶ್ (30) ಮತ್ತು ರಾಧಮ್ಮ (45) ಎಂದು ತಿಳಿದು ಬಂದಿದೆ.ಟ್ರ್ಯಾಕ್ಟರ್ಗೆ ರಾಗಿ ಬೇರ್ಪಡಿಸುವ ಯಂತ್ರವನ್ನು ಜೋಡಿಸಲಾಗಿತ್ತು. ಟ್ರ್ಯಾಕ್ಟರ್ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಯಂತ್ರ ಪಲ್ಟಿಯಾಗಿದೆ. ಇಬ್ಬರು ಕಾರ್ಮಿಕರು ಕೆಳಗಡೆ ಸಿಲುಕಿಕೊಂಡಿದ್ದರು.
ನಾಯಕನ ಹಳ್ಳಿ ಗ್ರಾಮದಲ್ಲಿ ರಾಗಿ ಕಟಾವು ಮಾಡಿದ ಹುಲ್ಲನ್ನು ಬೇರ್ಪಡಿಸಿ ವಾಪಸ್ ಬಂಗಾರಕ್ಕನಗುಡ್ಡ ಗ್ರಾಮಕ್ಕೆ ಕಾರ್ಮಿಕರು ಬರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.