ಚಾಮರಾಜನಗರ : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಚಾಮರಾಜನಗರದಲ್ಲಿ ವೇಗವಾಗಿ ಬಂದಂತಹ ಕಾರು ಒಂದು ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದೆ. ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೆ ಸಾವನ್ನಪ್ಪಿದ್ದರೆ, ಉಳಿದ ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ.
ಮೃತರನ್ನು ನಂದನ್ ಹಾಗೂ ಜೀವನ್ ಎಂದು ಗುರುತಿಸಲಾಗಿದೆ. ಸುನೀಲ್, ಧನುಷ್ ಮತ್ತು ಶಶಾಂಕ್ ತೀವ್ರವಾಗಿ ಗಾಯಗೊಂಡಿದ್ದಾರೆ.ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದಾಗ ಚೆಕ್‌ಪೋಸ್ಟ್ ಸಮೀಪ ಮರಕ್ಕೆ ಡಿಕ್ಕಿಯಾಗಿ ಅವಘಡ ಉಂಟಾಗಿದೆ. ಎಲ್ಲರೂ ವಿದ್ಯಾರ್ಥಿಗಳಾಗಿದ್ದು, ಮದುವೆಗೆ ಬಂದಿದ್ದರು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಾಯಗೊಂಡ ಸುನೀಲ್, ಧನುಷ್ ಮತ್ತು ಶಶಾಂಕ್ ನನ್ನು ತಕ್ಷ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಚಾಮರಾಜನಗರ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.