ಮೈಸೂರು : ದೆಹಲಿಯಲ್ಲಿ ಕಾರು ಬಾಂಬ್ ಸ್ಪೋಟ ಬೆನ್ನಲ್ಲೇ ರಾಜ್ಯದಲ್ಲಿ ಕೂಡ ಹೈ ಅಲರ್ಟ್ ಘೋಷಿಸಲಾಗಿದ್ದು, ಇನ್ನು ನಿನ್ನೆ ಮೈಸೂರು ಅರಮನೆ ಆವರಣದಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟಕ್ಕೆ ಕಾರಣ ಏನೆಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಘಟನೆ ಸಂಬಂಧ ಇದೀಗ ಮೈಸೂರು ಪೊಲೀಸರು ಎಫ್ಐಆರ್ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದೀಗ ಈ ಒಂದು ಸ್ಫೋಟಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಇಂದು ಮೈಸೂರಿಗೆ ಎನ್ಐಎ ತಂಡ ಆಗಮಿಸಲಿದೆ. ಮೈಸೂರು ಅರಮನೆಯ ಬಳಿಯ ಘಟನೆಗೆ ಸಂಬಂಧಿಸಿದಂತೆ ಪರಿಶೀಲನೆ ಮಾಡಲಿದೆ. ಸ್ಪೋಟದ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಲಿದ್ದಾರೆ ಸದ್ಯ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.ಇನ್ನು ಹೀಲಿಯಂ ಸಿಲಿಂಡರ್ ಸ್ಫೋಟಕ್ಕೆ ಹೀಲಿಯಂ ಗ್ಯಾಸ್ ತುಂಬುವ ವೇಳೆ ಒತ್ತಡ ಹೆಚ್ಚಾಗಿ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಹೌದು ಮೈಸೂರು ಅರಮನೆ ಮುಂಭಾಗದಲ್ಲಿ ಹೀಲಿಯಂ ಗ್ಯಾಸ್ ತುಂಬಿದ್ದ ಸಿಲಿಂಡರ್ ಸ್ಪೋಟಗೊಂಡು ಬಲೂನ್ ವ್ಯಾಪಾರಿ ಸಲೀಂ ಮೃತಪಟ್ಟ ಘಟನೆಯ ಅಸಲಿ ಕಾರಣ ಈಗ ಬಹಿರಂಗವಾಗಿದೆ. ಸಲೀಂ ಸತತವಾಗಿ ಬಲೂನ್‌ಗಳಿಗೆ ಹೀಲಿಯಂ ಗ್ಯಾಸ್ ತುಂಬುತ್ತಿದ್ದ. ಅಲ್ಲದೆ, ಸಿಲಿಂಡರ್ ಅನ್ನು ವೇಗವಾಗಿ ಆನ್–ಆಫ್ ಮಾಡಿದ್ದರಿಂದ ಒಳಭಾಗದಲ್ಲಿ ಹೀಟ್ ಉಂಟಾಗಿ ಒತ್ತಡ ಹೆಚ್ಚಾಗಿತ್ತು. ಇದರ ಪರಿಣಾಮ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಮೈಸೂರು ಪೊಲೀಸ್ ಮೂಲಗಳು ತಿಳಿಸಿವೆ.






